ಅನುದಿನ ಕವನ-೧೭೯೫, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ: ಸಾಧ್ಯವಾಗಿಸಿಕೊ ಸಾಧ್ಯವಾದರೆ…

ಸಾಧ್ಯವಾಗಿಸಿಕೊ ಸಾಧ್ಯವಾದರೆ…

ನನ್ನನ್ನು
ನಿನ್ನ ಆತ್ಮಕ್ಕೆ ಅಂಟಿಸಿಕೊಳ್ಳಲು
ನಿನ್ನ ಹೃದಯ ಬಡಿತವಾಗಲು
ನಿನ್ನ ನಿಟ್ಟುಸಿರ ಶಬ್ದವಾಗಲು
ನಿನ್ನ ನಾಡಿಯೊಳಗಿನ ಮಿಡಿತವಾಗಲು
ನಿನ್ನ ಹೊಕ್ಕುಳೊಳಗಿಂದ ಉಬ್ಬುವ
ಆಲೋಚನೆಯ ಸಂತತನವಾಗಲು

ಆಯಾಚಿತವಾಗಿ ಒದಗಿದೆ ಸಂದರ್ಭ
ಯಾವತ್ತಿಗೂ ನೀನು ಕಾಣುವ ಅಸಹಜ
ಕನಸಿನ ಸಣ್ಣ ಭಾಗವಾಗಿಸಿಕೊಳ್ಳಲು
ನಿನ್ನ ಅಂತರಂಗಕ್ಕೆ ಮಾನವೀಯ
ಸಹನೀಯ ಸ್ಪಂದನೆಯಾಗಲು
ನನಗೂ ಉಮೇದಿದೆ ನೋಡು
ನಿನ್ನ ಅಸಂಗತ ವಿಚಾರಗಳ ಪಾತ್ರವಾಗಲು

ನೀನು ನನ್ನ ರಾತ್ರಿಯಾಗಬಹುದು
ನಾನು ನಿನಗೆ ಹಗಲ ಬೆಳಕಾಗಬಹುದು
ಗೀಚುವ ಪ್ರತಿ ಅಕ್ಷರ ನೀನಾದರೆ
ಅಕ್ಷರದೊಳಗಿನ ಪ್ರತಿ ಲಹರಿ ನಾನಾಗಬಹುದು
ನಿನ್ನ ಕಣ್ಣೊಳಗೆ ತಾವು ಕೊಡು
ಬೆರಗಿನ ನೋಟವನ್ನು ಸದಾ ಕಾಯುತ್ತೇನೆ
ನೀನು ನನ್ನ ಅದಮ್ಯ ಅಸಾಧ್ಯ ರಹಸ್ಯವಾಗು
ವಿಸ್ಮಯಗಳ ಮಾಲೀಕತನ ದಕ್ಕಬಹುದು

ಮಿತಿಯಿಲ್ಲದಷ್ಟು ಬಾರಿ ನೀನನ್ನ ಆವರಿಸಬಹುದು
ಅಂಕೆ ಮೀರಿ ನಾ ನಿನ್ನ ಪ್ರೀತಿಸಬಹುದು
ನಿನ್ನ ರೆಕ್ಕೆಗಳ ಮೃದುತನವನ್ನು ನೀನೂ
ಪುಷ್ಪಮಂಜರಿಯ ಎಲ್ಲ ರಂಗಿನ ಸಮೇತ ನಾನೂ
ಪರಸ್ಪರ ಹಂಚಿಕೊಳ್ಳಬಹುದು, ಸವರಬಹುದು
ಗಡಿಯೊಂದಿದೆ ಶೃಂಗಾರಕ್ಕೆನ್ನುವುದ ಮರೆತುಬಿಡು
ಪರಾಗಸ್ಪರ್ಶದ ಪ್ರಸರಣಕ್ಕೆ ಕ್ಷಣವನ್ನು ಮೀಸಲಿಡು

ಅದೆಷ್ಟು ಯೋಚಿಸುತ್ತಿ ?ಅವಧಿ ಮೀರುವ
ಸಮಯ ಬಂದಿದೆ ಮೌನವಾಚಾಳಿಯಾಗು
ಬಂಧಿಸು ನನ್ನನ್ನು ನಿನ್ನ ಪ್ರೇಮ ಪ್ರಭಾವಳಿಯೊಳಗೆ
ಪುತ್ಥಳಿಯಾಗೋಣ ಇಬ್ಬರು ತಬ್ಬಿ ಒಬ್ಬರನೊಬ್ಬರು
ಆಳ ವಿಶಾಲ ಅಗಲ ಎತ್ತರದ ಗೊಡವೆ ಮೀರಿ
ಸಾಧ್ಯವಾದರೆ
ಬರೆಯೋಣ ನಿಶ್ಯಬ್ಧ ಒಲವ ಆಲಾಪಗೀತೆ
ನೀರವತೆಯ ವಿವಶ ಸಮ್ಮೋಹಗಾಥೆ

-ಮಮತಾ ಅರಸೀಕೆರೆ