ಅನುದಿನ ಕವನ-೧೭೯೬, ಕವಯತ್ರಿ: ಮಂಜುಳಾ ಹುಲಿಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಅವಳ‌ ಪ್ರೇಮಿಗೆ

ಅವಳ ಪ್ರೇಮಿಗೆ…

ಸಂಬಂಧಗಳು ನಿನ್ನ ಕುತ್ತಿಗೆಯ
ಸರಪಳಿಯಾದಾಗ ತುಂಡು ಮಾಡು
ಲೋಕದ ತಕ್ಕಡಿಗಳಿಗೆಲ್ಲಾ ಕೋಟಿ ತೂತು..
ನಿನ್ನ ತೂಗುವವರ ಲೆಕ್ಕ ಇಂದೇ ಚುಕ್ತ ಮಾಡು…

ರೆಕ್ಕೆ ಬಲಿತ ಹಕ್ಕಿ
ಉಂಡು ಹಾರಿಹೋಗುವಂತೆ
ಹಾರಲಾಗದ ಮನುಷ್ಯನ
ಬಂಧಗಳೆಲ್ಲವೂ ಅಕ್ರಮವೇ
ಬಂಧಿಯಾಗಬೇಡಾ
ಪ್ರೇಮ ರೆಕ್ಕೆ ಎಂದುಕೊಂಡಳ ಪ್ರೇಮಿ ನೀನು

ಮೀರಲೇ ಬೇಕಿದ್ದರೇ ಅವಳನ್ನೂ ಮೀರಿಕೋ
ಅವಳ ರೆಕ್ಕೆಯ ಭಾರ ನೀನಾಗದಂತೆ
ಮತ್ತಷ್ಟು ಸುಧಾರಿಸಿಕೋ…

ಬಂಧನಗಳ ಬಿಡಿಸಿಕೊಳ್ಳಲೇ
ನಿನ್ನ ಬೆನ್ನಿಗೆ ಬಿದ್ದವಳವಳು
ಸಂಬಂಧಗಳನ್ನೇ ಕುಣಿಕೆಯಾಗಿಸುವ
ಲೋಕದ ಕಟುಕತನ ನಿನ್ನ ಸೋಕದಿರಬೇಕು
ಪ್ರೇಮದ ಸ್ವತಂತ್ರ ಬೆರಗು
ನಿನ್ನ ಕಣ್ಣಿಗಿಳಿಯಬೇಕು
ಕಟ್ಟಿಡುವ ಎಲ್ಲಾ ಸಂಕೋಲೆಗಳೂ
ತುಂಡು ತುಂಡಾಗಬೇಕು…
ಮುಕ್ತತೆಯೇ ಬದುಕಾಗಬೇಕು..

ರೆಕ್ಕೆ ಬಲಿತ ಹಕ್ಕಿಯಂತೆ
ಹಗುರಾಗಿ ಹಾರಲಾಗದ ಮನುಷ್ಯರು
ಬಂಧನಕ್ಕೊಳಗಾದ ಹಕ್ಕಿಗಳು
ಎಂದಿಗೂ ಪ್ರೇಮದ ದಿಗಂತ ಮುಟ್ಟಲಾರರು…

ಹಾರಲು ಅಣಿ ಇರು ಹುಡುಗಾ
ಬದುಕು ಹಗುರಾದಷ್ಟೂ ಎತ್ತರ ಮುಟ್ಟಬೇಕು…
ಪ್ರೇಮ ರೆಕ್ಕೆ ಎಂದುಕೊಂಡವಳ ಪ್ರೇಮಿ ನೀನು…


-ಮಂಜುಳಾ ಹುಲಿಕುಂಟೆ, ಬೆಂಗಳೂರು