ಅನುದಿನ ಕವನ-೧೭೯೭, ಕವಯತ್ರಿ: ಸುರಭೀ ರೇಣುಕಾಂಬಿಕೆ, ಬೆಂಗಳೂರು

ಸಮಯದ ಅತ್ಯಂತ ದೊಡ್ಡ ಶಕ್ತಿಯೆಂದರೆ,
ಅದು ನಿಮ್ಮೊಳಗಿನ ಭಯವನ್ನು
ಇಂಚಿಂಚಾಗಿ ಅಳಿಸುತ್ತಾ ಹೋಗುತ್ತದೆ

ಮೊದಲಿನ ಹಾಗೆ, ನಿಮಗೆ
ಎಲ್ಲಿ ನೀರಾಗಬೇಕು,
ಎಲ್ಲಿ ಕಲ್ಲಾಗಬೇಕು ಎನ್ನುವ
ಗೊಂದಲ ಇರುವುದಿಲ್ಲ

ನೀವು ಇನ್ನೊಬ್ಬರ ಕತೆಯ
ಪಾತ್ರಧಾರಿಗಳಾಗಿರುವುದಿಲ್ಲ
ನಿಮ್ಮದೇ ಕತೆಯಲ್ಲಿ,
ಅವರ ಪಾತ್ರ ಬಂದು ಹೋಗಿರುತ್ತದೆ

ಯಾವ ನೋವುಗಳನ್ನು ಕಂಡರೆ
ನೀವು ಬೆಚ್ಚಿ, ಮುದುಡಿ ಕೂರುತ್ತಿದ್ದರೋ,
ಅದೇ ನೋವುಗಳನ್ನು ಇದೀಗ
ನಗು ನಗುತ್ತಾ ದಾಟಲು ಕಲಿತಿರುತ್ತೀರಿ

ಯಾರೋ ಸುಪಿರಿಯರ್
ಎನ್ನಿಸಿಕೊಂಡವರು
ಇನ್ನಿಲ್ಲದಂತೆ ಸಿಲ್ಲಿ ಎನ್ನಿಸತೊಡಗುತ್ತಾರೆ

ಮಿತ್ರರೆನ್ನಿಸಿಕೊಂಡವರ,
ಒಳಸುಳಿಗಳು ಇನ್ನಿಲ್ಲದಂತೆ,
ಸ್ಪಷ್ಟವಾಗಿ ಅರ್ಥವಾಗತೊಡಗುತ್ತದೆ

ಯಾರೋ ಶತ್ರುಗಳಂತಿದ್ದವರು,.,
ಇನ್ನಿಲ್ಲದಂತೆ ನಿಮ್ಮೆದುರೋ, ಬೆನ್ನ ಹಿಂದೆಯೋ
ನಿಮ್ಮನ್ನು ಮನಸಾರೆ ಅಡ್ಮೈರ್ ಮಾಡುತ್ತಿರುತ್ತಾರೆ

ನಿಮ್ಮೊಳಗೆ ಸಂಬಂಧಗಳ ವ್ಯಾಖ್ಯಾನ
ಅದಲು ಬದಲಾಗಿಬಿಡುತ್ತದೆ
ಕೊಟ್ಟು ಕೊಳ್ಳುವಿಕೆಯ ವ್ಯಾಪಾರ
ಈಗ, ಮೊದಲಿಗಿಂತ ಸಲೀಸಾಗಿ ಅರ್ಥವಾಗಿಬಿಡುತ್ತದೆ

ಒಂದಷ್ಟು ಹಿಂದಕ್ಕೆ ತಿರುಗಿದರೆ
“ಅರೆ” ಇದು ನಾನಾ ? ಎನ್ನುವಷ್ಟು
ನೀವು ಬದಲಾಗಿರುತ್ತೀರಿ…,
ಅದು ನಿಮಗೂ ಅರ್ಥವಾಗಿರುವುದಿಲ್ಲ.

ಹೌದು ! ನೀವು ಬದಲಾಗಿರುತ್ತೀರಿ
ಸಮಯಕ್ಕೆ ಅಂತದ್ದೊಂದು
ಪವಾಡ ಮಾಡುವ ಶಕ್ತಿ ಇದೆ


-ಸುರಭೀ ರೇಣುಕಾಂಬಿಕೆ, ಬೆಂಗಳೂರು