
ಬಳ್ಳಾರಿ, ಡಿ.1: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಇಲ್ಲಿನ ಬಸವೇಶ್ವರ ನಗರದಲ್ಲಿ ಸೋಮವಾರ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೂರು ಹಂತಗಳಲ್ಲಿ ಒಟ್ಟು 84 ಕೋಟಿ ರೂ.ಗಳ ಅನುದಾನ ತರಲಾಗಿದ್ದು, ಇವುಗಳ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ, ಬೆಳಗಾವಿ ಅಧಿವೇಶನದ ನಂತರ ಮತ್ತೆ 3 ಕೋಟಿ ರೂ.ಗಳ ಅನುದಾನದ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, ಕೊಟ್ಟ ಮಾತಿನಂತೆ ಬಳ್ಳಾರಿಯನ್ನು ಸುವರ್ಣ ಬಳ್ಳಾರಿಯಾಗಿ ರೂಪಿಸುತ್ತಿದ್ದೇವೆ ಎಂದರು.
ನಗರದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಂದಾಗಿ ಜನರಿಗೆ ಸದ್ಯಕ್ಕೆ ಅನಾನುಕೂಲ ಆಗುತ್ತಿರುವುದು ನಿಜ, ಇನ್ನೂ ಆರು ತಿಂಗಳು ಜನರು ಕಷ್ಟವನ್ನು ಸಹಿಸಿಕೊಳ್ಳಬೇಕು, ಏಕೆಂದರೆ ಈಗ ಸಾಕಷ್ಟು ಕಾಮಗಾರಿಗಳು ಮತ್ತೆ ಆರಂಭ ಆಗಲಿವೆ ಎಂದರು.
ಜ.3ರಂದು ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಆಗಲಿದೆ, ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಜನ ಭಾಗಿಯಾಗಲಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಕೆ.ಎನ್.ರಾಜಣ್ಣ, ಸಚಿವ ಜಮೀರ್ ಅಹ್ಮದ್, ಸಂಸದ ತುಕಾರಾಂ, ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ ರಾಜ್ಯದ ಜಿಲ್ಲೆಯ ಎಸ್ಟಿ ಸಮುದಾಯದ ಶಾಸಕರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇದಕ್ಕೂ ಮುನ್ನ 23ನೇ ವಾರ್ಡಿನ ಮಹಾನಂದಿಕೊಟ್ಟಂನಲ್ಲಿ ಮಹಾತ್ಮ ಗಾಂಧಿ ನಗರ ಯೋಜನೆ ಅಡಿ 2.50 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮೂಲಕ ಚಾಲನೆ ನೀಡಿದರು.

21ನೇ ವಾರ್ಡಿನ ಬಸವೇಶ್ವರ ನಗರದಲ್ಲಿ ಅಂದಾಜು 4 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ತದನಂತರ 15ನೇ ವಾರ್ಡಿನ ವಡ್ಡರ ಬಂಡೆಯ ಬಳಿ ಅಂದಾಜು ವೆಚ್ಚ 2 ಕೋಟಿ ರೂ.ಗಳಲ್ಲಿ, ಅದೇ ರೀತಿ ವಾರ್ಡ್ ಸಂಖ್ಯೆ 16ರ ಶ್ರೀರಾಂಪುರ ಕಾಲೋನಿಯಲ್ಲಿ 2.80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೇಯರ್ ಪಿ.ಗಾದೆಪ್ಪ, ಉಪ ಮೇಯರ್ ಮುಬೀನಾಬೀ, ಪಾಲಿಕೆಯ ಆಯುಕ್ತ ಪಿ.ಮಂಜುನಾಥ, ಮಾಜಿ ಮೇಯರ್ ರಾಜೇಶ್ವರಿ, ಸದಸ್ಯರಾದ ಸುರೇಖಾ ಗೌಡ, ನೂರ್ ಮೊಹಮ್ಮದ್, ಟಿ.ವಿ.ಪ್ರಸಾದ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಸೋಮಶೇಖರ್, ಚಾನಾಳ್ ಶೇಖರ್, ಗೋನಾಳ ನಾಗಭೂಷಣ, ಯಾಳ್ಪಿ ಪಂಪನಗೌಡ, ಬಿಸಿಲಹಳ್ಳಿ ಮಂಜು, ಶಂಕರ್ ಹಿರೇಮಠ, ಮಂಜು ಬೆಳ್ಳಿಗಾರ, ಗೌತಮ್, ಖಾದರ್, ಬಿಆರೆಲ್ ಸೀನಾ, ಬಾಲರಾಜು, ಚರಣ್, ಅಭಿ ಸೇರಿದಂತೆ ಹಲವರು ಹಾಜರಿದ್ದರು.
