
ಶಂಕರಘಟ್ಟ(ಶಿವಮೊಗ್ಗ), ಡಿ.3: ಪ್ರಧಾನ ಮತ್ತು ಅಪ್ರಧಾನವೆಂಬುವುದು ಸಾಂಸ್ಕೃತಿಕ ರಾಜಕೀಯದ ಉತ್ಪನ್ನ. ಏಕಮುಖವಾದ ಶುದ್ಧ ಸಂಸ್ಕೃತಿ ಇರುವುದಿಲ್ಲ. ಮಿಶ್ರ ಸಂಸ್ಕೃತಿ ಇರುತ್ತದೆ. ಪವಿತ್ರತೆ ಭಾಷೆಯ ಶತ್ರು. ಬೇರೆ ಬೇರೆ ಭಾಷೆಗಳ ಸಂಪರ್ಕದಿಂದ ಭಾಷೆಗಳು ಬೆಳೆಯುತ್ತವೆ. ಸಾಂಸ್ಕೃತಿಕ ಹಕ್ಕಿನ ಪ್ರತಿಪಾದನೆಯೇ ದೇಸಿವಾದ ಎಂದು ಖ್ಯಾತ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ ಅವರು ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಸಾಹಿತ್ಯಸಂಘ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ದೇಸಿವಾದ’ ಕುರಿತು ಅವರು ಮಾತನಾಡಿದರು. ದೇಸಿ ಪರಂಪರೆಗೆ ಅದ್ಭುತ ಶಕ್ತಿಯಿದೆ. ಜಗತ್ತಿನ ಕಥನ ಪರಂಪರೆಯ ಮೂಲ ಭಾರತದ್ದು. ಆಡು ಮಾತಿನ ಮೂಲಕ ಹೇಳುವ ಕಥೆಗಳು ಮನುಷ್ಯ ಜೀವನದ ಅನುಭವ ದಾಖಲೆಗಳು. ಸಂಸ್ಕೃತಿ ಸಂಕೀರ್ಣ ವಾದಾಗ ಬಹುಸಂಸ್ಕೃತಿ ಹುಟ್ಟಿಕೊಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವಿ ಕುಲಪತಿ ಪ್ರೊ.ಶರತ್ ಅನಂತ ಮೂರ್ತಿ ಅವರು, ವಿಶ್ವವಿದ್ಯಾಲಯಗಳ ಘನತೆ ಹೆಚ್ಚುವುದು ಕಟ್ಟಡಗಳಿಂದಲ್ಲ, ಉನ್ನತ ವ್ಯಕ್ತಿಗಳಿಂದ. ಚೆನ್ನಿ ಅಂತಹ ಅಧ್ಯಾಪಕರು ಮತ್ತು ಸಾಹಿತಿಗಳು ನಮ್ಮ ವಿಶ್ವವಿದ್ಯಾಲಯದ ಘನತೆ ಹೆಚ್ಚಿಸಿರುವರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು. ಕನ್ನಡಭಾರತಿ ವಿಭಾಗದ ನಿರ್ದೇಶಕರೂ ಆದ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಪ್ರಶಾಂತನಾಯಕ, ಪ್ರೊ.ದತ್ತಾತ್ರೇಯ ಉಪಸ್ಥಿತರಿದ್ದರು. ಡಾ.ಎಸ್.ವಿ. ಪುರುಷೋತ್ತಮ ನಿರೂಪಿಸಿದರು. ಡಾ. ಮಂಜುನಾಥ್ ವಂದಿಸಿದರು. ರಿಯಾಸಿ ಪ್ರಾರ್ಥಿಸಿದರು.
