ನನ್ನ ವಿದಾಯದ ನಂತರ
ಎದೆಯು ನೆತ್ತರಲಿ ಕಲ್ಲಾಗಿ ಹೋದಾಗ
ನಿಟ್ಟುಸಿರು ಶ್ವಾಸದಿ ಹೊರ ಬಿದ್ದು
ಹೃದಯವು ಮತ್ತೆ ಮಿಡಿಯಲಿ
ಹಗಲು ಇರುಳು ನೋವು ಭೋರ್ಗರೆದು
ಕಡಲಾಗಿ ಹರಿವ ನಿನ್ನ ಕಂಗಳು
ಹೊಸದಾದ ಕನಸ ಕಟ್ಟಲಿ
ಮೌನದ ಮೊರೆ ಹೋದ ಕೆಂದುಟಿಗಳಿಗೆ
ಮುಂಜಾನೆಯ ಮಂಜು ಮುತ್ತಿಡಲಿ
ಕೊಳೆತ ನೆನಪುಗಳ ನಾತವ ನಿನಗೆ
ಭರಿಸಲಾಗದೆ ಇರುವಾಗ
ಪರಿಮಳದಿ ಘಮಿಸೊ ತರ ತರದ ಹೂಗಳು
ನಿನ್ನ ಸುತ್ತ ನೂರಾರು ಹರಳಲಿ
ಒಲವ ಕತ್ತಲ ಕೊಣೆಯಲ್ಲಿ
ಉಸಿರು ಗಟ್ಟುತ್ತಿರುವಾಗ
ತಿಳಿಬೆಳಕಿನೊಂದಿಗೆ ತಂಪು ಗಾಳಿಸುಳಿಯಲಿ
ಯಾವುದೊ ಮೂಲೆಯಲ್ಲಿ
ಇನ್ನೇನು ಬದುಕು ಮುಗಿಯಿತೆಂದು
ಸೋಲೊಪ್ಪಿ ಮಂಡಿಯೂರಿ ಕೂತಾಗ
ಆತ್ಮಸ್ಥೈರ್ಯವು ನಿನ್ನ ಗೆಲ್ಲಿಸಲಿ
ಹೇಗಾದರು ಸರಿ ನೀ ನನ್ನ ಮರೆಯಲಿ …❤🩹

-ತರುಣ್ ಎಂ ಆಂತರ್ಯ ✍️, ಟಿ.ನಾಗೇನಹಳ್ಳಿ, ಚಿತ್ರದುರ್ಗ ಜಿ.
