ಲೋಹಿಯ ಪ್ರಶಸ್ತಿ ಪ್ರದಾನ: ಸಂಕಷ್ಟದಲ್ಲೂ ಭರವಸೆಯ ಬೆಳಕಾಗಿ ಕಂಡವರು ತಗಡೂರು -ಗಣ್ಯರ ಶ್ಲಾಘನೆ

ಬೆಂಗಳೂರು, ಡಿ.19: ನಿಸ್ವಾರ್ಥ, ಸೇವಾಮನೋಭಾವನೆಯಿಂದ ಕೆಲಸ ಮಾಡುವವರ ಸಂಖ್ಯೆ ವಿರಳವಾಗಿದೆ. ಅಂಥವರ ನಡುವೆ ಶಿವಾನಂದ ತಗಡೂರು ಅವರು ವಿಭಿನ್ನವಾಗಿ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಗಣ್ಯರು ಶ್ಲಾಘಿಸಿದರು.
ರೈತ ಕುಟುಂಬದಿಂದ ಬಂದ ತಗಡೂರು ಅವರು ರೈತ ಮತ್ತು ಜನಪರ ಚಳವಳಿಯಲ್ಲಿ ಗುರುತಿಸಿಕೊಳ್ಳುತ್ತಲೇ ಪತ್ರಕರ್ತರಾಗಿ ರೂಪುಗೊಂಡಿದ್ದು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುಕ್ಕಾಣಿ ಹಿಡಿದು, ಆ ಮೂಲಕ ಪತ್ರಕರ್ತರ ಸಮುದಾಯಕ್ಕೆ ನೀಡುತ್ತಿರುವ ಸೇವೆ ಅನನ್ಯವಾದದ್ದು ಎಂದು ಸಮಾರಂಭದಲ್ಲಿ ಸ್ಮರಿಸಿ ಅಭಿನಂದಿಸಲಾಯಿತು.
ಬೆಂಗಳೂರು ನಾಗರೀಕರ ವೇದಿಕೆ ಮತ್ತು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟಸ್ಟ್ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಶಿವಾನಂದ ತಗಡೂರು ಅವರಿಗೆ ಹಮ್ಮಿಕೊಂಡಿದ್ದ ನಾಗರೀಕ ಸನ್ಮಾನ ಮತ್ತು ಲೋಹಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಗಡೂರು ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಾಂಧಿಭವನದ ಅಧ್ಯಕ್ಷ ಮತ್ತು ಶಿಕ್ಷಣ ತಜ್ಞ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ,
ಮುಖ್ಯವಾಹಿನಿ ಮಾಧ್ಯಮವು ಇಂದಿಗೂ ತನ್ನ ಗಟ್ಟಿತನದ ಮೂಲಕ ಘನತೆಯನ್ನು ಉಳಿಸಿಕೊಂಡು ಬಂದಿದೆ. ಇದೇ ನಮಗೆಲ್ಲ ಆಶಾದಾಯಕ ಬೆಳವಣಿಗೆ ಎಂದರು.


ರಾಮಮನೋಹರ ಲೋಹಿಯಾ ಅವರು ದೇಶದ ರಾಜಕಾರಣದಲ್ಲಿ ಚಲನೆಯನ್ನು ತಂದವರು. ಲೋಹಿಯಾ ವಾದದಲ್ಲಿ ಬೆಳೆದು ಅರಳಿದ ಪ್ರತಿಭೆಗಳು ದೇಶ ಉದ್ದಗಕ್ಕೂ ಇದ್ದಾರೆ. ಅವರ ಹೆಸರಿನ ಪ್ರಶಸ್ತಿಯನ್ನು ಶಿವಾನಂದ ತಗಡೂರು ಅವರಿಗೆ ನೀಡುತ್ತಿರುವುದು ಅಭಿನಂದನೀಯ ಮತ್ತು ನಮಗೆಲ್ಲರಿಗೂ ಹೆಮ್ಮೆ ಎಂದರು.
ಸಂಘಟನೆ, ಸಂಸ್ಕಾರ, ಸೇವೆ ವ್ಯಕ್ತಿಯ ಸಾಧನೆಗೆ ಮುಖ್ಯ. ಇನ್ನೊಬ್ಬರ ಸೇವೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವುದೇ ಸಾರ್ಥಕ ಬದುಕು. ಅಂತಹ ವ್ಯಕ್ತಿತ್ವದ ತಗಡೂರು ಇನ್ನಷ್ಟು ಎತ್ತ=ರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ ಐನಕೈ ಅವರು, ಪತ್ರಕರ್ತರನ್ನು ಟೀಕೆ ಮಾಡುವವರೆ ಹೆಚ್ಚು. ಆದರೆ ಪತ್ರಕರ್ತರಿಗೆ ನಾಗರಿಕ ಸನ್ಮಾನ ಮಾಡುತ್ತಿರುವುದು ಅತ್ಯಂತ ಅಪರೂಪ. ಲೋಹಿಯಾ ಪ್ರಶಸ್ತಿಗಿಂತಲೂ ಈ ನಾಗರೀಕ ಸನ್ಮಾನ ಮುಖ್ಯವಾದದ್ದು. ಇದಕ್ಕೆ ಭಾಜನರಾಗಿರುವ ಶಿವಾನಂದ ತಗಡೂರು ನಿಜಕ್ಕೂ ಅಭಿನಂದನೀಯ ಎಂದರು.
ಅಭಿನಂದನಾ ಭಾಷಣ ಮಾಡಿದ ಕನ್ನಡಪ್ರಭ ಸಂಪಾದಕ ರವಿಹೆಗಡೆ, ಪತ್ರಿಕೋದ್ಯಮದಲ್ಲಿರುವ
ಎಡ ಬಲದ ಸಂಘರ್ಷದ ನಡುವೆ ಯಾವುದಕ್ಕೂ ಅಂಟಿಕೊಳ್ಳದೆ ತಗಡೂರು ಸೇವೆ ಸಲ್ಲಿಸುತ್ತಿರುವುದನ್ನು ನಾನು ಹತ್ತಿರದಿಂದ ನೋಡಿರುವೆ ಎಂದರು. ಎಲ್ಲಕ್ಕಿಂತಲೂ ಮೊದಲು ಮಾನವೀಯತೆಯೇ ನಿಜವಾದ ಪತ್ರಕರ್ತನ ಜವಾಬ್ದಾರಿ ಎನ್ನುವುದನ್ನು ಅರಿತು ಆ ನಿಟ್ಟಿನಲ್ಲಿಯೇ ಪತ್ರಕರ್ತರ ಸಂಘಟನೆಯನ್ನು ರೂಪಿಸಿ ನಡೆಸುತ್ತಿರುವುದು ವಿಶೇಷ ಎಂದು ಅವರ ಸೇವೆ ಸ್ಮರಿಸಿದರು.

ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಕರ್ತರಿಗೆ ಹಗಲಿರಳು ನೆರವಾಗುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಮೆರೆದಿದ್ದ ತಗಡೂರು ಅವರನ್ನು ಗೌರವಿಸಲು ಇದು ನಮಗೆ ಸಿಕ್ಕ ಅವಕಾಶ ಎಂದರು.
ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್.ಆರತಿ ಮಾತನಾಡಿ, ಹಿರಿಯ ಪತ್ರಕರ್ತರನ್ನು ಅವರ ಮನೆಯ ಅಂಗಳದಲ್ಲಿ ಅಭಿನಂದಿಸುವ ಕೆಲಸ ಮಾಡಿದ ತಗಡೂರು ಅಭಿನಂದನೀಯ ಎಂದರು.
ಕಾರ್ಯಕ್ರಮದ ಸಂಯೋಜಕ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಸ್ವಾಗತಿಸಿದರು. ಭೂಮಿ ಫೌಂಡೇಶನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ವಿತರಕರ ಸಂಘ, ರಂಗಸಿರಿ ಬಳಗ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಶಿವಾನಂದ ತಗಡೂರು ಅವರನ್ನು ಅಭಿನಂದಿಸಿ ಗೌರವಿಸಿದವು.