ನಾ ಓದಿದ ಪುಸ್ತಕ: ಹೆಕ್ಕಿತಂದ ನೆನಪುಗಳು (ಕೃತಿಕಾರರು: ಗುರುರಾಜ್ ಕೊಡ್ಕಣಿ, ಯಲ್ಲಾಪುರ) , ಪುಸ್ತಕ ಓದಿದವರು:ಶ್ರೀಪಾದ್ ಭಟ್, ಯಲ್ಲಾಪುರ

ಗುರುರಾಜ ಕೊಡ್ಕಣಿ

ಮಿತ್ರರು, ನಮ್ಮ ಊರಿನ ಪತ್ರಿಕಾ ಅಂಕಣಕಾರರೂ ಯುವ ಲೇಖಕರೂ ಆದ ಸಾಹಿತ್ಯ ಪ್ರೀತಿಯ ಜೀವ ಗುರುರಾಜ್ ಕೊಡ್ಕಣಿಯವರ ಹೆಕ್ಕಿತಂದ ನೆನಪುಗಳು ಎಂಬ ಕೃತಿ ಅಂಕಿತದಿಂದ ಇದೀಗ ಪ್ರಕಟವಾಗಿದೆ. ಇದನ್ನು ಓದಿದವರು ಖಂಡಿತ ತಮ್ಮ ಬಾಲ್ಯಕ್ಕೆ ಹಿಂದಿರುಗುತ್ತಾರೆ, ಹೀಗೆ ಮಾಡುವುದು ಈ ಕೃತಿಯ ವಿಶಿಷ್ಟತೆ. ಇದರಲ್ಲಿ ಈ ಕೃತಿಯ ಸಾರ್ಥಕತೆ ಇದೆ. ಈ ಕೃತಿಯ ಮೂಲಕ ಕೊಡ್ಕಣಿಯವರು ಕನ್ನಡದಲ್ಲಿ ಹೊಸ ಬಗೆಯ ಸಾಹಿತ್ಯ ಪ್ರಕಾರಕ್ಕೆ ಕೈಹಾಕಿದ್ದಾರೆ. ಎಲ್ಲರಿಗೂ ಅವರದೇ ಆದ ಬಾಲ್ಯ ಇದ್ದೇ ಇರುತ್ತದೆ.ಅದನ್ನು ಯಾರು ಎಷ್ಟರ ಮಟ್ಟಿಗೆ ಅನುಭವಿಸಿರುತ್ತಾರೆ ಎಂಬುದರ ಮೇಲೆ ಅದರ ಸ್ವಾರಸ್ಯ ನಿಂತಿರುತ್ತದೆ, ಇಲ್ಲಿ ಕೊಡ್ಕಣಿಯವರು ತಮ್ಮ ಬಾಲ್ಯವನ್ನು ಬಹಳ ದಟ್ಟವಾಗಿ ಅನುಭವಿಸಿದ್ದು ಎದ್ದು ಕಾಣುತ್ತದೆ. ಅದನ್ನು ಅವರು ಒಂದೊಂದು ಕಥನದ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಒಂದೊಂದು ಕಥನ ಓದುವಾಗ ಓದುಗರಿಗೆ ಅದೇ ರೀತಿಯ ನೆನಪುಗಳು ಮರುಕಳಿಸುವುದು.

ಪ್ರತಿಯೊಬ್ಬರಿಗೂ ಅವರ ಬಾಲ್ಯದ ಅನುಭವಗಳು ಬೇರೆ ಇರಬಹುದು, ಆದರೆ ಬಾಲ್ಯದ ಭಾವ ಮಾತ್ರ ಸಮಾನ, ಈ ಕಾರಣದಿಂದ ಈ ಕೃತಿ ಓದುಗರನ್ನು ಹೆಚ್ಚುತಟ್ಟುತ್ತದೆ. ಎಲ್ಲರಿಗೂ ಅವರ ಬಾಲ್ಯ ನೆನೆದಾಗ ಮೊದಲು ಮುನ್ನಲೆಗೆ ಬರುವುದು ಅವರ ಶಾಲಾ ನೆನಪುಗಳು. ಗುರುರಾಜರೂ ಈ ನೆನಪಿಗೆ ಇಲ್ಲಿ ಹೆಚ್ಚು ಅವಕಾಶ ಕೊಟ್ಟಿದ್ದಾರೆ. ಇವನ್ನು ಓದುತ್ತಿದ್ದರೆ ಓದುಗರಿಗೆ ಅವರ ಶಾಲಾ ದಿನಗಳು ನೆನಪಿನಂಗಳದಲ್ಲಿ ಸುಳಿದುಹೋಗುತ್ತವೆ. ಇದರಲ್ಲಿ ೩೧ ನೆನಪಿನ ಬುತ್ತಿಗಳಿವೆ, ಒಂದೊಂದು ಬುತ್ತಿಯ ರುಚಿಯೂ ಭಿನ್ನ, ವೈವಿಧ್ಯಮಯ. ತಮ್ಮ ಎಳವೆಯ ಏಳೆಂಟುವರ್ಷದ ಮಗುವಾಗಿದ್ದಾಗಿನಿಂದ ದೊಡ್ಡವರಾಗಿ ಸ್ವಂತ ದುಡಿಯುವವರೆಗಿನ ದಿನಗಳ ಚಿತ್ರಣವಿದೆ. ಬಾಲ್ಯದ ನೆನಪುಗಳು ಯಾರ ಮನಸ್ಸಿನಿಂದಲೂ ದೂರವಾಗುವುದಿಲ್ಲ, ಅವುಗಳಿಗೆ ಹಿಂದಿರುಗಿದಷ್ಟೂ ಮನುಷ್ಯನ ಯೌವ್ವನ ವೃದ್ಧಿಸುತ್ತದೆ. ಈ ಕೃತಿಯಲ್ಲಿ ಕೊಡ್ಕಣಿಯವರು ಅತ್ಯಂತ ಪ್ರಾಮಾಣಿಕವಾಗಿ ಬಾಲ್ಯದ ಅನುಭವಗಳನ್ನು ದಾಖಲಿಸಿದ್ದಾರೆ.  ಇಲ್ಲಿ ಈ ಅನುಭವಗಳನ್ನು ಹಂಚಿ ಖುಷಿ ಪಡುವುದು ಮಾತ್ರ ಅವರ ಉದ್ದೇಶವೇ ವಿನಾ ಯಾವುದನ್ನಾದರೂ ಅಂಕಿ ಅಂಶದ ಮೂಲಕ ಸ್ಥಾಪಿಸುವುದು ಉದ್ದೇಶವಲ್ಲ, ಹಾಗಿದ್ದರೆ ಇದು ಒಂದು ಕೇವಲ ಬಾಲ್ಯದ ದಾಖಲಾತಿ ಪುಸ್ತಕವಾಗುತ್ತಿತ್ತು.

ಉದಾಹರಣೆಗೆ ಸಿದ್ದಾಪುರಕ್ಕೆ ರಾಜ್‌ಕುಮಾರ್ ಅವರು ಬಂದಾಗ ನಡೆದ ಘಟನೆಯೊಂದನ್ನು ಬರೆಯುತ್ತಾರೆ, ಅದರಲ್ಲಿ ಅವರು ಈ ದಿನವನ್ನು ದಿನಾಂಕ ಸಹಿತ ಬರೆಯಬಹುದಾಗಿತ್ತು, ರಾಜ್‌ಕುಮಾರ್ ಅವರು ಅಲ್ಲಿಗೆ ಬಂದುಹೋದ ದಿನ ಸಿದ್ದಾಪುರದ ರಾಘವೇಂದ್ರಸ್ವಾಮಿಗಳ ಮಠದಲ್ಲಿಯೋ ಇತರೆ ದಿನಪತ್ರಿಕೆಯಲ್ಲೋ ಖಂಡಿತ ಸಿಗುತ್ತಿತ್ತು, ಇದನ್ನು ಅವರು ಹೇಳುವುದಿಲ್ಲ, ಇದರಿಂದ ಕೃತಿಗೆ ಬಾಲ್ಯದ ಖಚಿತತೆ ದೊರಕಿದೆ. ಇಂಥ ಅನೇಕಾನೇಕ ಸಂಗತಿಗಳಿವೆ, ಇದರಿಂದ ಎಲ್ಲರ ಬಾಲ್ಯದೊಂದಿಗೆ ಸಮಾನತೆ ಸಿದ್ಧವಾಗುತ್ತದೆ. ಏಕೆಂದರೆ ಬಾಲ್ಯದ ಘಟನೆಗಳಲ್ಲಿ ಹೆಚ್ಚೆಂದರೆ ಅಂದು ತಾವು ಧರಿಸಿದ್ದ ಬಟ್ಟೆ, ಸನ್ನಿವೇಶ ಇತ್ಯಾದಿಗಳು ನೆನಪಿರುತ್ತವೆ ಬಿಟ್ಟರೆ ದಿನಾಂಕ, ಖಚಿತ ಸಮಯಗಳು ನೆನಪಿರಲು ಸಾಧ್ಯವಿಲ್ಲ. ಈ ನೈಜತೆ ಇದರಲ್ಲಿದೆ.

ಕೊಡ್ಕಣಿಯವರ ಈ ಕೃತಿ ಓದುತ್ತಿದ್ದರೆ ಕನ್ನಡದಲ್ಲಿ ಬಾಲ್ಯಸಾಹಿತ್ಯ ಪ್ರಕಾರವೊಂದು ಹುಟ್ಟಲಿದೆ ಅನಿಸುತ್ತದೆ, ಏಕೆಂದರೆ ಕನ್ನಡ ಸಾಹಿತ್ಯದಲ್ಲಿ ವೃತ್ತಿ ಸಾಹಿತ್ಯ ಹಾಗೂ ಬಾಲ್ಯ ಸಾಹಿತ್ಯ ಕುರಿತ ಕೃತಿಗಳು ಇತ್ತೀಚೆಗೆ ಪ್ರಕಟವಾಗತೊಡಗಿವೆ, ಎಲ್ಲರಿಗೂ ಇರುವ ಬಾಲ್ಯದ ಅನುಭವ ಎಲ್ಲರಿಗೂ ದಕ್ಕುವಂತೆ ಎಲ್ಲರ ಅನುಭವ ಆಗುವಂತೆ ಮಾಡುವ ಶಕ್ತಿಈ ಸಾಹಿತ್ಯಕ್ಕಿದೆ, ಈ ಪ್ರಕಾರದ ಸಾಹಿತ್ಯ ವಿಶ್ವ ಸಾಹಿತ್ಯದಲ್ಲಿ ಕನ್ನಡದಲ್ಲೇ ಮೊದಲಾಗಲಿ.

ಕೊಡ್ಕಣಿಯವರ ಬಾಲ್ಯ ಕಳೆದುದು ಗ್ರಾಮೀಣ ಭಾಗದಲ್ಲಿ ಅದೇ ರೀತಿ ನಗರ ಪ್ರದೇಶದಲ್ಲಿ ಬಾಲ್ಯ ಕಳೆದವರ ಅನುಭವಗಳು ದಾಖಲಾದರೆ ಇವನ್ನು ತೌಲನಿಕವಾಗಿ ಗಮನಿಸಿದರೆ ನಮ್ಮ ಸಮಾಜದ ಒಂದು ಮುಖ ಅರಿವಾಗುತ್ತದೆ, ಈ ಕಾರಣಕ್ಕೆ ಈ ಬಗೆಯ ಕೃತಿಗಳು ನಮ್ಮ ಸಮಾಜ ಅಧ್ಯಯನಕ್ಕೆ ಆಕರಗಳಾಗುತ್ತವೆ, ಈ ದೃಷ್ಟಿಯಿಂದ ಇಂಥ ಕೃತಿಗಳಿಗೆ ಮಹತ್ವ ಇದೆ, ಇಂಥ ಕೃತಿಗಳು ಕನ್ನಡದಲ್ಲಿ ಮತ್ತಷ್ಟು ಹೊರಬರುವಂತೆ ಇದು ಪ್ರೇರೇಪಿಸಲಿ ಎಂದು ಹಾರೈಸಬಹುದಷ್ಟೇ.

-ಶ್ರೀಪಾದ್ ಭಟ್ ಯಲ್ಲಾಪುರ