ಸರ್ಕಾರಿ ಪ್ರಥಮದರ್ಜೆ ಕಾಲೇಜು ವಾರ್ಷಿಕೋತ್ಸವ: ತಂತ್ರಜ್ಞಾನ ವಿದ್ಯಾರ್ಥಿಗಳ ಕ್ರಿಯಾಶೀಲತೆ ಕುಗ್ಗಿಸುತ್ತಿದೆ -ಶಾಸಕ ಬಿ.ಪಿ ಹರೀಶ್ ಕಳವಳ

ಹರಿಹರ, ಮೇ 18: ಆಧುನಿಕ ಯುಗದಲ್ಲಿ ಯುವಜನರಲ್ಲಿ ಡಿಜಿಟಲ್ ಜ್ಞಾನ ಆವರಿಸುತ್ತಿದ್ದು, ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದ ತಂತ್ರಜ್ಞಾನ ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆಯನ್ನು ಕುಗ್ಗಿಸುತ್ತಿದೆ ಎಂದು ಶಾಸಕರದಾದ ಬಿ.ಪಿ ಹರೀಶ್ ಅವರು ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿದ್ದ ೨೦೨೫-೨೬ ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸ್ಕೌಟ್ ಮತ್ತು ಗೈಡ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.                  ಕೃತಕ ಬುದ್ದಿಮತ್ತೆಯ (ಎಐ) ಆವರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಕುಟುಂಬ, ತನ್ನೂರು ಮತ್ತು ದೇಶ- ರಾಜ್ಯದ ಹೆಮ್ಮೆಯನ್ನು ಹೆಚ್ಚಿಸುವ ಜವಾಬ್ದಾರಿ ಇದೆ. ಉತ್ತಮ ಶಿಕ್ಷಣ ಪಡೆದರೆ ವಿದ್ಯಾರ್ಥಿಗಳಿಗೆ ಲಾಭ. ಆ ಹಿನ್ನೆಲೆಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹಾರೈಸಿದರು.

ಸಮಾರೋಪ ಭಾಷಣ ಮಾಡಿದ ದಾವಣಗೆರೆಯ ವಿನ್ನರ್ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಡಾ.ಶಿವರಾಜ್ ಕಬ್ಬೂರ್ ಅವರು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಲ್ಲಾ ಹಂತದಲ್ಲೂ ವಿದ್ಯಾಥಿಗಳು ಭಿನ್ನ-ಭಿನ್ನ ಆಯಾಮಗಳಲ್ಲಿ ಜ್ಞಾನವನ್ನು ಪಡೆಯುತ್ತಾ ಬಂದಿರುತ್ತಾರೆ. ಆದರೆ ಪದವಿ ಮಟ್ಟದ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಗಳು ಅರಳಲು, ಬೆಳವಣಿಗೆಗೆ ಹೊಂದಲು ಮತ್ತು ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಇರುವ ಬಗ್ಗೆ ಎಚ್ಚರಿಸಿದರು.

ಶ್ರಧ್ಧೆ, ನಿಷ್ಠೆ, ತಾಳ್ಮೆ, ಭದ್ಧತೆ ಹಾಗೂ ಸಂಯಮ ಸಾಧನೆಗೆ ರಹದಾರಿಯಾಗಿವೆ. ಹೀಗೆ ವಿದ್ಯಾರ್ಥಿಗಳು ತಮ್ಮನ್ನು ತಾವು ರೂಪಿಸಿಕೊಂಡು ಪೋಷಕರಿಗೆ ಕೀರ್ತೀ ತರುವಂತೆ ಮನವರಿಕೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ವಿದ್ಯಾರ್ಥಿ ಯುವಜನರಲ್ಲಿ ಆಲೋಚನೆಗಳು ಉನ್ನತಮಟ್ಟದಲ್ಲಿರಬೇಕು. ಪದವಿ ಅಧ್ಯಯನದಲ್ಲಿ ಪಡೆದ ಜ್ಞಾನ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ  ೨೦೨೪-೨೫ ನೇ ಶೈಕ್ಷಣಿಕ ಸಾಲಿನಲ್ಲಿ ಹತ್ತನೆಯ ರ‍್ಯಾಂಕ್ ಗಳಿಸಿದ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಮಾನಸ ಉತ್ತಿಗಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು.

ಇದೇ ಸಮಯದಲ್ಲಿ ಕಾಲೇಜಿನ ೨ ವರ್ಷದ ವಾರ್ಷಿಕ ವರದಿಯನ್ನು ಶಾಸಕ ಬಿ.ಪಿ ಹರೀಶ್ ಅವರು ಬಿಡುಗಡೆ ಮಾಡಿದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೂ ಗೌರವಿಸಲಾಯಿತು.

ದೈಹಿಕಶಿಕ್ಷಣ ನಿರ್ದೇಶಕರಾದ ಡಾ.ಚಂದ್ರಶೇಖರ್.ಸಿ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಯೋಗೇಶ್.ಕೆ.ಜೆ, ಯುವ ರೆಡ್ ಕ್ರಾಸ್‌ನ ಸಂಚಾಲಕರಾದ ಡಾ.ಗಂಗರಾಜು.ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್ನರೇಂಜರ್ ಗಳಾದ ಡಾ.ಜಿ.ಎನ್.ದ್ರಾಕ್ಷಾಯಿಣಿ, ಡಾ.ಗೌರಮ್ಮ.ಎಸ್.ಎಂ, ರೋರ‍್ಸ್ ಲೀಡರ್ ಮನೋಹರ.ಕೆ.ಎಸ್, ಐ.ಕ್ಯೂ.ಎಸ್.ಸಿ ಸಹಸಂಯೋಜಕರಾದ ಅಬ್ದುಲ್ ಬಷೀರ್, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ವೀರೇಶ್ ಅಜ್ಜಣ್ಣವರ್, ಶಶಿನಾಯ್ಕ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂತಿಮ ಬಿ.ಎ ವಿದ್ಯಾರ್ಥಿನಿ ಕು.ಅರ್ಪಿತಾ ಪ್ರಾರ್ಥಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕು.ಆಶ್ಲೇಷ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕರು ಹಾಗೂ ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಹೆಚ್.ಪಿ.ಅನಂತನಾಗ್ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ.ಹೆಚ್ ಪ್ರಾಸ್ತಾವಿವಾಗಿ ಮಾತನಾಡಿದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೆಂಕಪ್ಪನವರ ಬಸವರಾಜ್ ಅವರು ಅತಿಥಿಯನ್ನು ಪರಿಚಯಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಹನುಮಂತಪ್ಪ ವೈ ಕಾರ್ಯಕ್ರವನ್ನು ನಿರ್ವಹಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ.ಜಿ.ಪಿ ವಂದಿಸಿದರು.

****

Leave a Reply

Your email address will not be published. Required fields are marked *