ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ನಿಧನ: ಭರಣಿ ವೇದಿಕೆ ಕಂಬನಿ

ಬಳ್ಳಾರಿ, ಜೂ.16: ಕರ್ನಾಟಕ ಲಲಿತಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿ ಪುರಸ್ಕೃತ ಹೆಸರಾಂತ ಚಿತ್ರ ಕಲಾವಿದ ನಗರದ ಮಂಜುನಾಥ ಗೋವಿಂದವಾಡ(52) ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಯಿ, ಪತ್ನಿ, ಓರ್ವ ಪುತ್ರಿ, ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಂಜೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತಿಮ‌ ಸಂಸ್ಕಾರ ‌ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೂರು ದಶಕಗಳ ಕಾಲ ಚಿತ್ರಕಲಾ ಸೇವೆ ಸಲ್ಲಿಸಿದ ಮಂಜುನಾಥ ಅವರು ಸಾಂಸ್ಕೃತಿಕ ಸಂಘಟಕರಾಗಿಯೂ ಗುರುತಿಸಿ ಕೊಂಡಿದ್ದರು. ಇವರ ಸಾವಿರಾರು ಚಿತ್ರಗಳು ಚಿತ್ರಪ್ರೇಮಿಗಳ ಮನ ಗೆದ್ದಿವೆ.‌ ಮೂರು ವರ್ಷಗಳಿಂದ ಕಸಾಪ ಕಟ್ಟಡದ ಮೊದಲ ಮಹಡಿಯಲ್ಲಿ ಚಿತ್ರಕಲಾ ಪ್ರದರ್ಶನ ನಡೆಯುತ್ತಿದ್ದು ಬಳ್ಳಾರಿ ಆಗಮಿಸುವ ನಾಡಿನ ಗಣ್ಯರು ಭೇಟಿ ನೀಡಿ ಗೋವಿಂದವಾಡ ಅವರ ಪ್ರತಿಭೆಯನ್ನು ಮೆಚ್ಚಿ ಬೆನ್ನು ತಟ್ಟುತ್ತಿದ್ದರು.
ಇವರ ಜೀವನ ಮತ್ತು ಸಾಧನೆ ಕುರಿತು ‌ಕಸಾಪ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರಪ್ಪ ಅವರು ಮಂಜುನಾಥ ಗೋವಿಂದವಾಡ ಹೆಸರಿನಲ್ಲಿ ಕೃತಿಯೊಂದನ್ನು ರಚಿಸಿದ್ದಾರೆ.


ಹಂಪಿ ಉತ್ಸವದ ವೇದಿಕೆ ಸೇರಿದಂತೆ ನೂರಾರು ಸರಕಾರಿ, ಖಾಸಗಿ ಕಾರ್ಯಕ್ರಮಗಳಿಗೆ ಆಕರ್ಷಕ ವೇದಿಕೆಗಳನ್ನು ವಿನ್ಯಾಸ ಗೊಳಿಸಿ ಜನಪ್ರಿಯರಾಗಿದ್ದರು.
ಸರಕಾರ ಸೇರಿದಂತೆ ಸಂಘ ಸಂಸ್ಥೆಗಳು ಇವರ ಕಲಾ ಪ್ರತಿಭೆಯನ್ನು ಮೆಚ್ಚಿ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದವು.

ಭರಣಿ ವೇದಿಕೆ ಕಂಬನಿ: ಪ್ರತಿಭಾವಂತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರ ಅಕಾಲಿಕ ನಿಧನಕ್ಕೆ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಸಂಸ್ಕೃತಿ ಪ್ರಕಾಶನ ಕಂಬನಿ ಮಿಡಿದಿವೆ.                ಸರಳ ಸಜ್ಜನಿಕೆ ಮಂಜುನಾಥ ಅವರೊಂದಿಗಿನ ಎರಡೂವರೆ ದಶಕಗಳ ಒಡನಾಟ ಸ್ಮರಿಸಿರುವ ವೇದಿಕೆ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಗೋವಿಂದವಾಡ ಅವರ ಅಗಲಿಕೆ ಅಖಂಡ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *