
ಹರಿಹರ: ವಿದ್ಯಾವಂತ ಮಹಿಳೆಯು ಕುಟುಂಬದ ಬೆಳವಣಿಗೆಗೆ ಮತ್ತು ದೇಶದ ಅಭಿವೃದ್ಧಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾಳೆ. ಅದರೊಂದಿಗೆ ತಮ್ಮ ಮಕ್ಕಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಕಾರಾತ್ಮಕ ಮೌಲ್ಯಗಳನ್ನು ಉತ್ತೇಜಿಸುವ ಮೂಲಕ ತಮ್ಮ ಕುಟುಂಬದ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಾಳೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಬಿ.ಪಿ.ಹರೀಶ್ ಅವರು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ 2026-27 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸೈಟ್ ಮತ್ತು ಗೈಡ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳಿಗೆ ಅವರು ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶದಲ್ಲಿ ನಿಜಕ್ಕೂ ಸುಸ್ಥಿರ ಅಭಿವೃದ್ಧಿಯಲ್ಲಿ ಸುಶಿಕ್ಷತ ಮಹಿಳೆಯರು ಸಾಕಷ್ಟು ಪ್ರಭಾವ ಬೀರಿದ್ದಾರೆ ಎಂದು ಮಹಿಳೆಯರ ಸಾಧನೆಯನ್ನು ಶ್ಲಾಘಿಸಿ, ಶೈಕ್ಷಣಿಕ ಸಾಧನೆಗೆ ವಿದ್ಯಾಭ್ಯಾಸದೊಂದಿಗೆ ಯೋಗ, ಧ್ಯಾನ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಎಸ್.ಜೆ.ವಿ.ಪಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಬಿ.ಬಿ.ನಂದ್ಯಾಲ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಜ್ಞಾನಾರ್ಜನೆಗೆ ಅಧ್ಯತೆ ನೀಡಿ, ಇನ್ನಿತರ ಋಣಾತ್ಮಕ ಚಟುವಟಿಕೆಗಳಿಂದ ದೂರವಿರಿ. ಆ ಮೂಲಕ ತಮ್ಮ ಪೋಷಕರ ಆಶಯಗಳನ್ನು ಇಡೇರಿಸಿ. ಕ್ಷಮಾಪಣಾ ಭಾವ, ಧನ್ಯತಾ ಭಾವ, ಅನುಕಂಪ ಭಾವ, ಅಭಿಪ್ರಾಯ ಭಾವ, ಪ್ರಶಂಸಾ ಭಾವ ಹಾಗೂ ತಪ್ಪು ಒಪ್ಪಿಕೊಳ್ಳುವ ಭಾವದಂತಹ ಸೂತ್ರಗಳನ್ನು ಜೀವನದಲ್ಲಿ ಅಳವಡಿಕೊಂಡರೆ ಸಂತೋಷ ಭರಿತ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಕುಂತಲ.ಎನ್ ಅವರು ಮಾತನಾಡಿ, ಮಹಿಳೆಯರಿಗೆ ಶಿಕ್ಷಣ ನೀಡುವುದರಿಂದ ವೈಯಕ್ತಿಕ ಜೀವನ ಪರಿವರ್ತನೆಯಾತ್ತದೆ. ಬಲಿಷ್ಠ, ಹೆಚ್ಚು ಸಮೃದ್ಧ ಮತ್ತು ಸಮಾನ ಸಮಾಜ ನಿರ್ಮಾಣವಾಗುತ್ತದೆ. ಮಹಿಳೆಯರು ಶಿಕ್ಷಣ ಪಡೆದಾಗ, ಕುಟುಂಬಗಳು ಉತ್ತಮ ಆರೋಗ್ಯ, ಸುಧಾರಿತ ಜೀವನ ಮಟ್ಟ ಮತ್ತು ಹೆಚ್ಚಿನ ಆರ್ಥಿಕ ಸ್ಥಿರತೆಯನ್ನು ಅನುಭವಿಸಲು ಸಾಧ್ಯ ಎಂದು ಹೇಳಿದರು.
ಡಿ.ಆರ್.ಎಂ ಸರ್ಕಾರಿ ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರಯ್ಯ.ಎಸ್, ಮಲೆಬೆನ್ನೂರಿನ ಸರ್ಕಾರಿ ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಭಾಗ್ಯ,ಕೆ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಐ.ಕ್ಯೂ.ಎಸ್.ಸಿ ಸಂಚಾಲಕರಾದ ಡಾ.ಯೋಗೀಶ್.ಕೆ.ಎಂ, ಕಛೇರಿ ಅಧೀಕ್ಷರಾದ ಶ್ರೀಮತಿ ಜಬೀನ್ ತಾಜ್, ಗ್ರಂಥಪಾಲಕರಾದ ಚಿದಾನಂದಪ್ಪ.ಎಸ್, ರೇಂಜರ್ಸ್ ಮತ್ತು ರೋವರ್ಸ್ ಲೀಡರ್ಗಳಾದ ಡಾ.ದ್ರಾಕ್ಷಾಯಿಣಿ.ಜಿ.ಎನ್. ಮನೋಹರ್.ಕೆ.ಎಸ್, ಯುವ ರೆಡ್ ಕ್ರಾಸ್ನ ಸಂಚಾಲಕರಾದ ಯೋಗೀಶ್.ಕೆ.ಜೆ, ಐಕ್ಯೂಎಸಿ ಸಹ ಸಂಯೋಜಕರಾದ ಅಬ್ದುಲ್ ಬಷೀರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿ ಹರೀಶ್.ಹೆಚ್.ಟಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಚಂದ್ರಶೇಕರ್.ಸಿ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಗೌರಮ್ಮ.ಎಂ.ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರಜಿ.ಪಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಹನುಮಂತಪ್ಪ.ಕೆ.ವೈ ವಂದಿಸಿದರು.
