ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನರ ಏಳಿಗೆಯೇ ಸರ್ಕಾರದ ಮಹಾ ಸಂಕಲ್ಪ: ಸಚಿವ ಟಿ. ರಘುಮೂರ್ತಿ

ಬಳ್ಳಾರಿ,ಸೆ.17: ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಮುಕ್ತಿ ಪಡೆದ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಪ್ರಗತಿ, ಸಾಮಾಜಿಕ ನ್ಯಾಯ ಹಾಗೂ ಜನರ ಏಳಿಗೆಯೇ ನಮ್ಮ ಸರ್ಕಾರದ ಅಚಲ ಸಂಕಲ್ಪವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಅವರು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿಪೂರ್ವ (ಮಾ.ಪು) ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

1947ರ ಆಗಸ್ಟ್ 15ರಂದು ಇಡೀ ಭಾರತಕ್ಕೆ ಸ್ವಾತಂತ್ರ್ಯ ಬಂದರೂ, ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿ ಸ್ವತಂತ್ರವಾಗಿರಲು ನಿರ್ಧರಿಸಿದ್ದರಿಂದ ಕಲ್ಯಾಣ ಕರ್ನಾಟಕದ ಆಗಿನ ಕಲ್ಬುರ್ಗಿ, ಬೀದರ್, ರಾಯಚೂರು ಸೇರಿದಂತೆ ಇಂದಿನ ಏಳು ಜಿಲ್ಲೆಗಳಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಕಾಸಿಂ ರಜ್ವಿ ನೇತೃತ್ವದ ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಟಗಾರರು ರಣಕಹಳೆ ಊದಿದರು. ಅಂತಿಮವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಜವಾಹರಲಾಲ್ ನೆಹರೂ ಅವರ ದಿಟ್ಟ ನಿರ್ಧಾರದ ಫಲವಾಗಿ ನಡೆದ ಐದು ದಿನಗಳ ಸೈನಿಕ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ಈ ಭಾಗಕ್ಕೆ ಮುಕ್ತಿ ದೊರೆಯಿತು. ಈ ಐತಿಹಾಸಿಕ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಎಲ್ಲ ಮಹನೀಯರನ್ನು ಸ್ಮರಿಸಬೇಕಿದೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರ್ಮಸಿಂಗ್ ಅವರ ಪ್ರಯತ್ನದಿಂದಾಗಿ ಸಂವಿಧಾನದ 371 (ಜೆ) ತಿದ್ದುಪಡಿಯ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಲಭಿಸಿತು. ಇದರಿಂದಾಗಿ ಶಿಕ್ಷಣ, ಉದ್ಯೋಗ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮೀಸಲಾತಿ ಮತ್ತು ಅನುದಾನ ಒದಗಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಈವರೆಗೆ ಸುಮಾರು 18,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಪ್ರಮುಖ ವಲಯಗಳಿಗೆ ಆದ್ಯತೆ ನೀಡಲಾಗಿದೆ. ಶಿಕ್ಷಣಕ್ಕೆ 2,202 ಕೋಟಿ, ಆರೋಗ್ಯಕ್ಕೆ 2,071 ಕೋಟಿ, ಉದ್ಯೋಗಾವಕಾಶಕ್ಕೆ 974 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 498 ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ 638 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 313 ಕೋಟಿ, ಅಂತರ್ಜಲ ಅಭಿವೃದ್ಧಿಗೆ 425 ಕೋಟಿ, ಕಲ್ಯಾಣ ಪಥಕ್ಕೆ 1,000 ಕೋಟಿ, ಪ್ರಜಾಸೌಧಗಳ ನಿರ್ಮಾಣಕ್ಕೆ 166 ಕೋಟಿ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬರ ಪರಿಸ್ಥಿತಿ ಹಾಗೂ ಸರ್ಕಾರದ ಸಿದ್ಧತೆ:
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು,
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಮಳೆಯ ಕೊರತೆ ಹಾಗೂ 3 ವಾರಗಳ ಸತತ ಒಣ ಹವೆ/ಡ್ರೈ ಸ್ಪೆಲ್ ಆಧಾರದ ಮೇಲೆ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಅರ್ಹ ತಾಲೂಕುಗಳನ್ನೂ ಪಟ್ಟಿಗೆ ಸೇರಿಸಿ, ಕೇಂದ್ರ ಸರ್ಕಾರಕ್ಕೆ ಪರಿಹಾರ ಪ್ರಸ್ತಾವನೆ ಸಲ್ಲಿಸಲಾಗುವುದು. ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದರ ಜೊತೆಗೆ, ವಿಬಿಜಿ ರಾಮ್‌ಜಿ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಜನರಿಗೆ ಉದ್ಯೋಗ ನೀಡಿ ಗುಳೆ ಹೋಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಯುವಜನತೆ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ:
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆಯ ಆಶಯದಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಜಾರಿಯಲ್ಲಿರುವ ಐದು ಗ್ಯಾರಂಟಿ ಯೋಜನೆಗಳಿಗೆ 1,41,210 ಕೋಟಿಗಳನ್ನು ವಿನಿಯೋಗಿಸಿ 2.70 ಕೋಟಿ ಕುಟುಂಬಗಳಿಗೆ ಆಸರೆಯಾಗಲಾಗಿದೆ ಎಂದು ವಿವರಿಸಿದರು.                                          ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು 10,000 ‘ಭಾರತ್ ಜೋಡೋ ಯುವ ಸಂಘ’ಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ, 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಹಾಗೂ ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ವಿಶ್ವವಿದ್ಯಾಲಯ ಸ್ಥಾಪನೆಯಂತಹ ಮುನ್ನೋಟದ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಜನಪ್ರತಿನಿಧಿಗಳು ಕೇವಲ ಟೀಕೆ, ಆರೋಪಗಳಿಗೆ ಸೀಮಿತವಾಗದೆ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.

ಸಂಸದ ಈ.ತುಕಾರಾಮ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಬದ್ಧತೆ ಹಾಗೂ ಕೊಡುಗೆಗಳು ಐತಿಹಾಸಿಕವಾಗಿವೆ. ಕಾಂಗ್ರೆಸ್ ಸರ್ಕಾರಗಳು ತಂದ ಮೀಸಲಾತಿ ಕ್ರಮಗಳಿಂದಾಗಿ ಇಂದು ಹಿಂದುಳಿದ, ಎಸ್‌ಸಿ/ಎಸ್‌ಟಿ ವರ್ಗಗಳ ನಾಯಕರು ಶಾಸಕರು, ಸಚಿವರು, ಸಂಸದರಾಗಲು ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನೀಡಲಾದ ಪ್ರೊ. ಗೋವಿಂದರಾವ್ ವರದಿಯನ್ನು ಉಲ್ಲೇಖಿಸಿದ ಅವರು, ಪ್ರಸ್ತುತ ರಾಜ್ಯದ 236 ತಾಲೂಕುಗಳ ಪೈಕಿ 93 ಅತ್ಯಂತ ಹಿಂದುಳಿದ, 36 ಹೆಚ್ಚು ಹಿಂದುಳಿದ ಹಾಗೂ 43 ಹಿಂದುಳಿದ ತಾಲೂಕುಗಳಾಗಿ ಗುರುತಿಸಲ್ಪಟ್ಟಿವೆ. ಕೇವಲ 64 ತಾಲೂಕುಗಳು ಮಾತ್ರ ಅಭಿವೃದ್ಧಿ ಹೊಂದಿದ್ದು, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಶಾಸಕಾಂಗ ಹಾಗೂ ಕಾರ್ಯಾಂಗ ಇನ್ನಷ್ಟು ಎಚ್ಚರಿಕೆಯಿಂದ ಶ್ರಮಿಸಬೇಕಿದೆ ಎಂದು ತಿಳಿಸಿದರು.

ಅಧಿಕಾರ, ಹುದ್ದೆಗಳು ಶಾಶ್ವತವಲ್ಲ; ಜನರಿಗೆ ಮಾಡುವ ಕೆಲಸಗಳು ಮತ್ತು ಹಾಕಿಕೊಡುವ ಹೆಜ್ಜೆಗುರುತುಗಳು ಮಾತ್ರ ಶಾಶ್ವತ. ಪ್ರಜಾಪ್ರಭುತ್ವದ ನಾಲ್ಕೂ ಅಂಗಗಳು ಒಟ್ಟಾಗಿ ಈ ಭಾಗದ ಭವಿಷ್ಯ ರೂಪಿಸಲು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ವಿಶೇಷ ಉಪನ್ಯಾಸ ನೀಡಿದರು.


ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಶಾಲಾ- ಕಾಲೇಜು ಮಟ್ಟದಲ್ಲಿ ಏರ್ಪಡಿಸಿದ್ದ ಪ್ರಬಂಧ, ಆಶು-ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ‘ಹೈದರಾಬಾದ್ ವಿಮೋಚನಾ ಸುತ್ತ-ಮುತ್ತ’ ವಿಶೇಷ ಕೈಪಿಡಿಯನ್ನು ಗಣ್ಯರು ಅನಾವರಣಗೊಳಿಸಿದರು. ಬಳಿಕ 371(ಜೆ) ಅನುಷ್ಠಾನಕ್ಕಾಗಿ ಶ್ರಮಿಸಿದ ಹೋರಾಟಗಾರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಸಂಡೂರು ಶಾಸಕಿ ಈ.ಅನ್ನಪೂರ್ಣ, ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ ಚಿದಾನಂದಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ .ಕೆ., ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ.ಪಿ.ಎಸ್ ಹರ್ಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿಲ್ಲಾ ಪಂಚಾಯತ್ ಸಿಇಒ ಮಹಮ್ಮದ್ ಹಾರಿಸ್ ಸುಮೇರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.
*****

Leave a Reply

Your email address will not be published. Required fields are marked *