
ಬಳ್ಳಾರಿ, ಸೆ.14: ಧರ್ಮದ ಹೆಸರಿನಲ್ಲಿ ಮಾಡಬಾರದ್ದನ್ನು ಮಾಡುತ್ತಿರುವ, ಚಿನ್ನಕ್ಕೆ ತುಕ್ಕು ಹಿಡಿಯುವ ಕಾಲಘಟ್ಟದಲ್ಲಿ ಇದ್ದೇವೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞ ತಿಳಿಸಿದರು.
ಜಮಾತೆ ಇಸ್ಲಾಮಿ ಹಿಂದ್ ಬಳ್ಳಾರಿ ಜಿಲ್ಲಾ ಘಟಕವು ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಎನ್ನುವ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಂದು ಸುಳ್ಳನ್ನು ಹಲವು ಬಾರಿ ಹೇಳಿ ಅದನ್ನೇ ಸತ್ಯವೆಂದು ಸಾಧಿಸುವ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಅವರವರ ಧರ್ಮಗಳ ನಿಜಾಚರಣೆಯನ್ನು ಅನುಷ್ಠಾನಗೊಳಿಸುವ ಮೂಲಕ ಸತ್ಯ, ನ್ಯಾಯ ಮತ್ತು ಶಾಂತಿ ಮಾರ್ಗದಲ್ಲಿ ನಡೆಯುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಮಾದಕ ವಸ್ತು ಸೇವನಾ ಮುಕ್ತ ಸಮಾಜ ರಚನೆ, ಬಡ್ಡಿ ವ್ಯವಹಾರವನ್ನು ವಿರೋಧಿಸುವ, ಸ್ತ್ರೀಯರ ಸ್ವತಂತ್ರ ಹಾಗೂ ಪ್ರತಿಯೊಬ್ಬ ಮಾನವರ ಹಕ್ಕುಗಳ ಪ್ರತಿಪಾದನೆ ಹಾಗೂ ಶೋಷಣಾ ಮುಕ್ತ ಸಮಾಜದ ರಚನೆಗೆ ಪ್ರವಾದಿ ಮಹಮ್ಮದರು ಒತ್ತು ನೀಡಿದ್ದಾರೆ ಎಂದರು. ಕರುಣೆ, ಪ್ರೀತಿ ಬತ್ತಿ ಹೋಗುತ್ತಿರುವ ಸಮಾಜ ನಿರ್ಮಾಣವಾಗುತ್ತಿದೆ, ವಿದ್ಯಾವಂತರು ಹೆಚ್ಚಾದಂತೆ ವೃದ್ಧಾಶ್ರಮ ಹೆಚ್ಚಾಗುತ್ತಿರುವುದು ಅನಾಗರೀಕ ಸಂಸ್ಕೃತಿ ಎಂದು ಮುಹಮ್ಮದ್ ಕುಂಞ ವಿಷಾಧಿಸಿದರು. ಕ್ರೈಸ್ತ ಧರ್ಮ ಗುರುಗಳಾದ ಫಾದರ್ ಮ್ಯಾಕ್ಸಿಮ್ ಅವರು ಮಾತನಾಡಿ, ಎಲ್ಲಾ ಧರ್ಮಗಳ ದಾರ್ಶನಿಕರ, ಆದರ್ಶ ವ್ಯಕ್ತಿಗಳ ಸಂದೇಶಗಳ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವುದು ಜಮಾತೆ ಇಸ್ಲಾಮೀ ಹಿಂದ್ ನ ಉದ್ದೇಶವಾಗಿದೆ. ಪರಸ್ಪರರು ಅರಿತು ಬಾಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಕೆ. ವಿ. ರವಿಶಂಕರ್ ಮಾತನಾಡಿ, ಇಂದಿನ ಸಮಾಜದಲ್ಲಿ ಸತ್ಯಕ್ಕಿಂತ ಸುಳ್ಳನ್ನು ಸಮರ್ಥಿಸುವವರ ಮಧ್ಯೆ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಸತ್ಯವನ್ನೇ ಪ್ರತಿಪಾದಿಸಬೇಕು. ಪ್ರವಾದಿಯವರು ಮಾನವತ್ವದ ನಾಯಕ ಪರಿಪೂರ್ಣ ಸಮಾಜ ಸುಧಾರಕರು ಲೋಕದ ಮಾದರಿಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ನೆರೆಯವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳದೆ ಯಾವುದೇ ಧಾರ್ಮಿಕ ಕೈಂಕರ್ಯ ಮಾಡಿದರೂ ವ್ಯರ್ಥ ಎಂದು ವಾಲ್ಮೀಕಿ ಗುರುಕುಲಾಶ್ರಮ ಜೀರ್ಣೋದ್ಧಾರ ಸಂಸ್ಥೆಯ ಅಧ್ಯಕ್ಷರಾದ ಯು. ಶಿವಾನಂದ ತಿಳಿಸಿದರು.
ಎ ಎಸ್ ಎಮ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಗೋವಿಂದರಾಜ್ ಅವರು ಮಾತನಾಡಿ, ಜಗತ್ತಿನ ಎಲ್ಲ ಧರ್ಮಗಳು ಮನುಷ್ಯನ ಮನಸ್ಸನ್ನು ಸಂಸ್ಕರಿಸುವ ವಿಧಾನ ಕಲಿಸಿ ಕೊಟ್ಟಿವೆ ಆದರೆ ನಾವು ಧರ್ಮದ ಮೂಲ ಉದ್ದೇಶ ಅರಿಯದೆ, ಸ್ವಾರ್ಥ ಸಾಧನೆಗಾಗಿ ಧರ್ಮಗಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಹೇಳಿದರು. ನಾವೆಲ್ಲರೂ ಧರ್ಮದ ತಿರುಳನ್ನು ಅರಿತು ಬಾಳಬೇಕು ಆ ಮೂಲಕ ಭ್ರಾತೃತ್ವದ ಸರ್ವ ಸಮಾನತೆಯ ಸಮಾಜ ನಿರ್ಮಿಸಲು ಎಲ್ಲರೂ ಸಿದ್ದರಾಗಬೇಕೆಂದು ತಿಳಿಸಿದರು.
ನಿಮ್ಮ ಮಕ್ಕಳು ನಿಮ್ಮ ಮಾತನ್ನು ಪಾಲಿಸುವವರಾಗಿದ್ದರೆ ಅದೇ ನೀವು ಮಾಡಿದ ಪುಣ್ಯದ ಸಂಪಾದನೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವುದು ಪ್ರತಿಯೊಬ್ಬ ತಂದೆ ತಾಯಿಗಳ ಕರ್ತವ್ಯವಾಗಿದೆ ಎಂದು ನಗರದ ಸರ್ ಖಾಜಿಗಳಾದ ಮೊಹಮ್ಮದ್ ಸಿದ್ದಿಕಿ ತಿಳಿಸಿದರು.
ಆರ್ಥಿಕ ಮತ್ತು ರಾಜಕೀಯ ಸ್ವಾರ್ಥಗಳಿಗೆ ಇಂದು ಪ್ರಪಂಚದಲ್ಲಿ ಕೊಲೆ ಸುಲಿಗೆ ಯುದ್ಧ ನಡೆಯುತ್ತಿವೆಯೇ ಹೊರತು ಧಾರ್ಮಿಕ ಕಾರಣಗಳಿಂದಾಗಿ ಅಲ್, ಲ ಎಲ್ಲರೂ ಕೂಡಿ ಬಾಳುವುದು ಇಂದಿನ ತುರ್ತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಹೇಳಿದರು.
ವೇದಿಕೆಯಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್, ಬೌದ್ಧ ಧರ್ಮ ಗುರುಗಳಾದ ಕಮಲ ರತ್ನ ಬಂತೇಜಿ, ಶ್ವೇತಾಂಬರ ತೇರಾ ಪಂತ್ ಅಧ್ಯಕ್ಷರಾದ ಹರೀಶ್ ಜೈನ್, ಸಿಖ್ ಸಮಾಜದ ಮುಖಂಡರಾದ ಸುರೀಂದರ್ ಸಿಂಗ್, ಜಮಾತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕರಾದ ಅನ್ವರ್ ಪಾಷ ಉಮರಿ, ಜಿಲ್ಲಾ ಸಂಚಾಲಕರಾದ ಸೈಯದ್ ಜೈನುಲ್ಲಾಬಿದೀನ್ ಖಾದ್ರಿ, ತಾಲೂಕು ಘಟಕದ ಅಧ್ಯಕ್ಷ ಸೈಯದ್ ನಿಜಾಮುದ್ದೀನ್ ಉಪಸ್ಥಿತರಿದ್ದರು.
ಮುಹಮ್ಮದ್ ಖಲೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಯದ್ ಮಿಸ್ಬಾಹುದ್ದೀನ್ ಖಾದ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
