ಗಾಂಧೀಜಿ ನಿನ್ನೆಗೆ ಮುಗಿದ ಕಥೆಯಲ್ಲ!
ಕೈಯಲ್ಲಿ ಆಯುಧ ಹಿಡಿಯದೆ
ಸಾಮ್ರಾಜ್ಯವನ್ನೇ ನಡುಗಿಸಿದ
ಅಹಿಂಸೆಯ ಮಹಾಶಕ್ತಿವಂತ!
ಕೈಯಲ್ಲಿ ಯಾವ ಅಧಿಕಾರವಿರದೆ
ಕೋಟ್ಯಾಂತರ ಹೃದಯಗಳ ಗೆದ್ದ
ಜನಮನದ ಮಹಾನಾಯಕ!
ಮಾತಿನಲ್ಲಷ್ಟೇ ಸತ್ಯವನ್ನಾಡದೆ
ಬದುಕಿನಲ್ಲೇ ಸತ್ಯವನ್ನು ತೋರಿದ
ಲೋಕದ ಸತ್ಯಸಾಧಕ!
ಶತ್ರುವನ್ನೆಂದಿಗು ದ್ವೇಷಿಸದೆ
ಅನ್ಯಾಯವನ್ನೆಲ್ಲ ಎದುರಿಸಿದ
ವಿಶ್ವದ ಧೈರ್ಯಶಾಲಿ!
ಆಡಂಬರದ ಬಟ್ಟೆಗಳ ಬಿಟ್ಟು
ಬಡವರ ನೋವನ್ನೆಲ್ಲ ಹೊದ್ದ
ಜನಜಗತ್ತಿನ ಸರಳಜೀವಿ!
ತನ್ನ ಹಸಿವು ನೋವುಗಳಿಗಿಂತ
ಪರರ ಹಸಿವು ನೀಗಿಸಲು ದುಡಿದ
ಮಹಾನ್ ಕರುಣಾಮೂರ್ತಿ!
ಜಾತಿ ಧರ್ಮಗಳ ಹೆಸರಿನಲ್ಲಿ
ಗೋಡೆ ಕಟ್ಟದೆ ಸೇತುವೆ ಕಟ್ಟಿದ
ಧೀಮಂತ ಸಮನ್ವಯವಾದಿ!
ತನ್ನ ಹೆಜ್ಜೆ ಗುರುತುಗಳಿಗಿಂತ
ದೇಶದ ಹೆಜ್ಜೆ ಗುರುತು ಉಳಿಸಿದ
ಯುಗಮಾನದ ದೇಶಸೇವಕ!
ಸೆರೆಮನೆಯಲ್ಲಿನ ಕತ್ತಲೆಯಲ್ಲು
ಸ್ವಾತಂತ್ರ್ಯದ ಬೆಳಕನ್ನು ಕಂಡ
ಛಲಬಿಡದ ಕನಸುಗಾರ!
ಗುಂಡಿಗೆ ಎದೆಯೊಡ್ಡಿದರೂ
ದ್ವೇಷಕ್ಕೆಂದೂ ಮನಸ್ಸು ಕೊಡದ
ದೈವಸದೃಶ ಕ್ಷಮಾಶೀಲ!
ಮಹಾತ್ಮ ಗಾಂಧೀಜಿ ಎಂದರೆ
ಒಂದು ಹೆಸರು ಮಾತ್ರವಲ್ಲ
ನಡೆಯಬಹುದಾದ ತತ್ವ ಸಿದ್ಧಾಂತ!
ಮಹಾತ್ಮ ಗಾಂಧೀಜಿ ಎಂದರೆ
ಒಬ್ಬ ಮನುಷ್ಯ ಮಾತ್ರವಲ್ಲ
ಬದುಕಬಹುದಾದ ಒಂದು ಆದರ್ಶ!
ಮಹಾತ್ಮ ಗಾಂಧೀಜಿ ಎಂದರೆ
ನಿನ್ನೆಗೆ ಮುಗಿದ ಕಥೆಯಲ್ಲ
ನಾಳೆಗೂ ಬೇಕಾದ ಮಾನವೀಯತೆ!

-ಟಿ.ಪಿ. ಉಮೇಶ್, ಹೊಳಲ್ಕೆರೆ
