ಆಧುನಿಕ ಶಿಕ್ಷಣ ವ್ಯವಸ್ಥೆ ಮತ್ತು ಗಾಂಧೀ ಶೈಕ್ಷಣಿಕ ಚಿಂತನೆ ಚಿಂತನಾ ಬರಹ: ಸಿ.ಎಂ. ಫೈಝ್‌ ಮುಹಮ್ಮದ್‌, ಬೆಂಗಳೂರು

ಆಧುನಿಕ ಶಿಕ್ಷಣ ವ್ಯವಸ್ಥೆ ಮತ್ತು ಗಾಂಧೀ ಶೈಕ್ಷಣಿಕ ಚಿಂತನೆ

ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಚಿಂತಕ, ರಾಜಕೀಯ ಮುತ್ಸದ್ದಿ, ಸತ್ಯಶೋಧಕ, ಸತ್ಯಪ್ರತಿಪಾದಕ, ಶಿಕ್ಷಣ ಚಿಂತಕರಾಗಿದ್ದ ಮಹಾತ್ಮ ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ, ಮಹಾಶಕ್ತಿ. ಮಾನವ ಕುಲದ ಮಹಾ ಆದರ್ಶ. ಗಾಂಧೀಜಿಯವರದು ಪರಿಪೂರ್ಣ ವ್ಯಕ್ತಿತ್ವ. ತಮ್ಮ ಜೀವನವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಅವರು, ಮಾನವ ಘನತೆಯನ್ನು ಎತ್ತಿಹಿಡಿದ ಮಹಾ ಬೆಳಕು.
ಮಗುವಿನ ಮತ್ತು ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಹಾಗೂ ನೈತಿಕ ಉನ್ನತಿಗೆ ಇರುವ ಏಕೈಕ ಪ್ರಬಲ ಮಾಧ್ಯಮವೇ ಶಿಕ್ಷಣ ಎಂಬುದನ್ನು ದೃಢವಾಗಿ ನಂಬಿದ್ದ ಅವರು, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ವಿಶಿಷ್ಟವಾಗಿವೆ. ಸಮಕಾಲೀನ ಶೈಕ್ಷಣಿಕ ಸಮಸ್ಯೆಗಳಿಗೆ ಅವರ ಚಿಂತನೆಗಳು ಪರಿಹಾರ ಒದಗಿಸಬಲ್ಲವು.

*ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು :

• ನಯೀ ತಾಲೀಮ್ (ಮೂಲ ಶಿಕ್ಷಣ): ಗಾಂಧೀಜಿಯವರು 1937ರಲ್ಲಿ ವಾರ್ಧಾ ಸಮ್ಮೇಳನದಲ್ಲಿ ‘ಮೂಲ ಶಿಕ್ಷಣ’ ಅಥವಾ ‘ನಯೀ ತಾಲೀಮ್’ (ನೂತನ ಶಿಕ್ಷಣ) ಯೋಜನೆಯನ್ನು ಮಂಡಿಸಿದರು. ಜ್ಞಾನ ಮತ್ತು ಕೌಶಲ ಬೇರೆ ಬೇರೆಯಲ್ಲ ಎಂಬುದು ಮೂಲ ಶಿಕ್ಷಣದ ಮೂಲ ಅಡಿಪಾಯವಾಗಿದೆ.

• ಉದ್ಯೋಗ ಕೇಂದ್ರಿತ ಶಿಕ್ಷಣ: ಶಿಕ್ಷಣವು ಸ್ವಾವಲಂಬನೆಗೆ ದಾರಿಯಾಗಬೇಕು ಮತ್ತು ಮಕ್ಕಳು ತಮ್ಮ ಶಿಕ್ಷಣದ ಅವಧಿಯಲ್ಲೇ ಯಾವುದಾದರೂ ಕರಕುಶಲತೆ ಅಥವಾ ಕೈಕಸಬು ಕಲಿಯಬೇಕು.

• ಸಾಕ್ಷರತೆ ಮತ್ತು ಶಿಕ್ಷಣ: ಅಕ್ಷರಜ್ಞಾನವು ಶಿಕ್ಷಣದ ಅಂತ್ಯವೂ ಅಲ್ಲ, ಆರಂಭವೂ ಅಲ್ಲ; ಅದು ಕೇವಲ ಸಾಧನವಷ್ಟೇ. ಮಗುವಿನ ಮೈ, ಮನಸ್ಸು ಮತ್ತು ಆತ್ಮದಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತೆಗೆಯುವುದು ನಿಜವಾದ ಶಿಕ್ಷಣ.

• ಅಸ್ಪೃಶ್ಯರಿಗೆ ಶಿಕ್ಷಣ ಫೂರೈಕೆ :
ಸ್ವರಾಜ್ಯ ಪಡೆಯುವುದರ ಸಲುವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಶಾಲೆಗಳಲ್ಲಿ ಅಸ್ಪೃಶ್ಯರಿಗೆ ಶಿಕ್ಷಣ ಕಲ್ಪಿಸಿ, ಅವರ ಅಭಿವೃದ್ಧಿಗೆ ಕ್ರಮ ಕೈಗೊಂಡಾಗಲೇ ದೇಶಕ್ಕೆ ಅಂಟಿದ ಅಸ್ಪೃಶ್ಯತೆಯ ಶಾಪವಿಮೋಚನೆ ಸಾಧ್ಯ.

• ಮಾತೃಭಾಷೆಗೆ ಪ್ರಾಮುಖ್ಯತೆ:
ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿಯ ಮಾತೃಭಾಷೆಯಲ್ಲೇ ಪೂರೈಕೆಯಾಗಬೇಕು. ಅಲ್ಲದೆ, 7 ರಿಂದ 14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರೆಯುವುದು ಅವಶ್ಯ.

• ನೈತಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ: ಸತ್ಯ, ಪ್ರಾಮಾಣಿಕತೆ, ಅಹಿಂಸೆ ಮತ್ತು ನೈತಿಕತೆಯಿಲ್ಲದ ಶಿಕ್ಷಣಕ್ಕೆ ಯಾವುದೇ ಬೆಲೆಯಿಲ್ಲ. ಶಾಂತಿಯುತ ಸಮಾಜ ನಿರ್ಮಾಣಕ್ಕೆ ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ಅತ್ಯಗತ್ಯ.

ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು ಇಂದಿನ ಶಿಕ್ಷಣ ವ್ಯವಸ್ಥೆಯೊಂದಿಗೆ ಕೆಲವು ಸಾಮ್ಯತೆ ಮತ್ತು ಭಿನ್ನತೆಗಳನ್ನು ಹೊಂದಿರುವುದನ್ನು ಗಮನಿಸಬೇಕಾಗುತ್ತದೆ. ಇಂದು ರಾಷ್ಟ್ರೀಯ ಶಿಕ್ಷಣ ನೀತಿ (NEP) ರಾಜ್ಯ ಶಿಕ್ಷಣ ನೀತಿ (SEP)ಗಳು ಜಾರಿಯಲ್ಲಿವೆ.

ಆಧುನಿಕ ಶಿಕ್ಷಣ ಪದ್ಧತಿ ಪ್ರಮುಖ ಅಂಶಗಳು :

ಇಂದು ೫ ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಕಲಿಯಲು ಆದ್ಯತೆ ನೀಡಲಾಗಿದೆ. 6ನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣ ಮತ್ತು ಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಯೋಗಿಕ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ ಕೋಡಿಂಗ್‌ನಂತಹ ಆಧುನಿಕ ಕೌಶಲ್ಯಗಳ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಾಂಪ್ರದಾಯಿಕ ಮಾನವೀಯ ಮೌಲ್ಯಗಳ ಜೊತೆಗೆ ಜಾಗತಿಕ ಪೌರತ್ವ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನ, ಆನ್‌ಲೈನ್ ಕಲಿಕಾ ಪ್ರಕ್ರಿಯೆಗಳ ಮೂಲಕ ಸಾಧ್ಯ ಮಾಡಲಾಗುತ್ತಿದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ಸಮಶಿಕ್ಷಣ ಪದ್ಧತಿಯ ಮೂಲಕ ಸಾಂವಿಧಾನಿಕ ಆಶಯದ ಸಾಕಾರಕ್ಕೆ ಶಿಕ್ಷಣದ ಮೂಲಕ ಶ್ರಮಿಸಲಾಗುತ್ತಿದೆ.

*ವೃತ್ತಿಪರ ಕೌಶಲ್ಯಗಳಿಗೆ ಆದ್ಯತೆ :
ಶಿಕ್ಷಣವನ್ನು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತಗೊಳಿಸಬಾರದು. ಬದಲಾಗಿ, ಅದೊಂದು ಜೀವನ ರೂಪಿಸುವ ಬಹುಮುಖ್ಯ ಸಾಧನ ಎಂದು ಪ್ರತಿಪಾದಿಸಿದರು ಗಾಂಧೀಜಿ.
ಅವರ ಪ್ರಕಾರ:
• ಶ್ರಮದ ಗೌರವ : ದೈಹಿಕ ಶ್ರಮ ಮತ್ತು ಬೌದ್ಧಿಕ ಬೆಳವಣಿಗೆ ಒಟ್ಟಿಗೆ ಸಾಗಬೇಕು. ಯಾವುದೇ ಕೆಲಸ ಕೀಳಲ್ಲ ಎಂಬುದನ್ನು ಮಗು ಶಾಲೆಯಲ್ಲಿಯೇ ಕಲಿತುಕೊಳ್ಳಬೇಕು.

• ಸ್ಥಳೀಯ ಸಂಪನ್ಮೂಲಗಳ ಬಳಕೆ: ಹಳ್ಳಿಯ ವಾತಾವರಣಕ್ಕೆ ಸೂಕ್ತವಾದ ನೂಲುವುದು, ನೇಯುವುದು, ಮರಗೆಲಸ, ಕೃಷಿ, ಮತ್ತು ಚರ್ಮದ ಕೆಲಸಗಳಂತಹ ಸಾಂಪ್ರದಾಯಿಕ ಕರಕುಶಲತೆಗಳನ್ನ ಮಕ್ಕಳಿಗೆ ಬಾಲ್ಯದಲ್ಲಿಯೇ ಹೇಳಿಕೊಡಬೇಕು.

• ಸ್ವಾವಲಂಬನೆ : ವಿದ್ಯಾರ್ಥಿಯು ಶಾಲೆಯಿಂದ ಹೊರಬಂದ ತಕ್ಷಣ ಉದ್ಯೋಗಕ್ಕಾಗಿ ಅಲೆಯದೆ, ಯಾವುದಾದರೊಂದು ಕೆಲಸದಲ್ಲಿ ತೊಡಗಿಕೊಂಡು ಸ್ವಾವಲಂಬನೆ ಸಾಧಿಸಬೇಕು.

*ಪ್ರಾಯೋಗಿಕ ಸವಾಲುಗಳು :

• ಮೂಲಸೌಕರ್ಯಗಳ ಕೊರತೆ: ಭಾರತದ ಗ್ರಾಮೀಣ ಭಾಗದ ಶಾಲೆಗಳಲ್ಲಿ ವೃತ್ತಿಪರ ಶಿಕ್ಷಣ ನೀಡಲು ಸೂಕ್ತವಾದ ಪ್ರಯೋಗಾಲಯಗಳು, ಉಪಕರಣಗಳು ಮತ್ತು ತರಬೇತಿ ಪಡೆದ ಬೋಧಕರ ಕೊರತೆಯಿದೆ.

• ಸಾಮಾಜಿಕ ಮನೋಭಾವ: ಇಂದಿಗೂ ನಮ್ಮ ಸಮಾಜದಲ್ಲಿ ದೈಹಿಕ ಶ್ರಮ ಅಥವಾ ವೃತ್ತಿಪರ ಕೌಶಲ್ಯಗಳಿಗಿಂತ ಕೇವಲ ಅಂಕಗಳು ಮತ್ತು ಸಾಂಪ್ರದಾಯಿಕ ಪದವಿಗಳಿಗೇ ಹೆಚ್ಚು ಗೌರವ ನೀಡುವ ಮನಸ್ಥಿತಿ ಇದೆ.

• ಡಿಜಿಟಲ್ ಕಂದಕ : ನಗರ ಪ್ರದೇಶದ ಮಕ್ಕಳಿಗೆ ಸಿಗುವ ಆಧುನಿಕ ತಾಂತ್ರಿಕ ಕೌಶಲ್ಯಗಳ ತರಬೇತಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿಲ್ಲ.

ಒಟ್ಟಾರೆ, ಅಂಕಕೇಂದ್ರಿತ ಶಿಕ್ಷಣ ವ್ಯವಸ್ಥೆ ಹಾಗೂ ತೀವ್ರ ಸ್ಪರ್ಧಾತ್ಮಕ ಪೈಪೋಟಿಗಳು ಏರ್ಪಟ್ಟಿರುವ ಇಂದಿನ ದಿನಗಳಲ್ಲಿ ಗಾಂಧೀಜಿಯವರ ‘ಆತ್ಮದ ಉನ್ನತಿ’ ಮತ್ತು ‘ನೈತಿಕ ವಿಕಾಸ’ ಬಹಳ ಮಹತ್ವದ್ದಾಗಿದೆ. ಇಂದಿನ ಕೌಶಲ್ಯಾಧಾರಿತ ಕಲಿಕೆಯು ಗಾಂಧೀಜಿಯವರ ಸ್ವಾವಲಂಬನೆ ಹಾಗೂ ರಾಮರಾಜ್ಯದ ಕನಸನ್ನು ಆಧುನಿಕ ರೂಪದಲ್ಲಿ ಸಾಕಾರಗೊಳಿಸುತ್ತಿದೆ ಎಂಬುದನ್ನು ಮರೆಯಲಾಗದು.


-ಸಿ.ಎಂ. ಫೈಝ್‌ ಮುಹಮ್ಮದ್‌
ನಿರ್ದೇಶಕರು,
ಹೆಚ್‌.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳು, ಬೆಂಗಳೂರು

Leave a Reply

Your email address will not be published. Required fields are marked *