ಅನುದಿನ ಕವನ-೧೯೮೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಮಹಾತ್ಮ

ಮಹಾತ್ಮ

ಗಾಂಧಿ ಎಂದರೆ …
ಹಿಮಾಲಯ
ಏರಿದಷ್ಟೂ ಎತ್ತರ
ಅದ ಏರ ಹೋಗಿ
ಜಾರಿ ಬಿದ್ದವರೆಷ್ಟೋ
ಏರಲಾಗದೆ
ಜರಿದವರೆಷ್ಟೋ..
ಏರಿ ಅರಿವಿನ ಬಿತ್ತರ
ತಿಳಿದವರೆಷ್ಟೋ..

ಗಾಂಧಿ ಎಂದರೆ..
ಮಹಾಸಾಗರ
ಇಳಿದಷ್ಟೂ ಆಳ
ತಿಳಿದಷ್ಟೂ ಅಗಾಧ
ಇಳಿಯ ಹೋಗಿ
ಮುಳುಗಿದವರಷ್ಟೋ..
ಆಳಕ್ಕಿಳಿದು
ಮುತ್ತುಗಳ ಹೆಕ್ಕಿ
ತಂದವರೆಷ್ಟೋ..

ಗಾಂಧಿ ಎಂದರೆ
ನೀಲಾಕಾಶ
ಸರಹದ್ದುಗಳಿಲ್ಲದ
ಅನಂತ
ಕಣ್ಣ ಪೊರೆ ಕಳಚಿದರೆ
ಕೋರೈಸುವವು
ಗ್ರಹ ತಾರೆಗಳು
ಕಂಡು ಖುಷಿಯಾದವರೆಷ್ಟೋ
ಕಾಣದೆ ಕರುಬಿದವರೆಷ್ಟೋ

ಗಾಂಧಿ ಎಂದರೆ
ಅದು ಬರಿ ಹೆಸರೆ
ಸತ್ಯದ ಉಸಿರು
ಶಾಂತಿಯ ಬಸಿರು
ತ್ಯಾಗದ ಹಸಿರು
ಅಹಿಂಸೆಯ ಒಸರು.
ತಿಳಿಯಲು ಇದನು
ನಾವು ತಿಳಿಯಾಗಬೇಕು .

-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.

Leave a Reply

Your email address will not be published. Required fields are marked *