ಶರಣ ಸಂಸ್ಕೃತಿ ಉತ್ಸವ–2026: ಬಸವಣ್ಣನವರ ಕಳಬೇಡ ಕೊಲಬೇಡ ವಚನ ಕನ್ನಡ ನಾಡಿನ ಜನರ ಗೀತೆ ಆಗಬೇಕು -ಚಿಂತಕ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಪ್ರತಿಪಾದನೆ

ಚಿತ್ರದುರ್ಗ :ಬಸವಣ್ಣನವರ ಕಳಬೇಡ ಕೊಲಬೇಡ ವಚನ ಈ ನಾಡಿನ ಜನರ ಗೀತೆ ಆಗಬೇಕು ಎಂದು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ, ಚಿಂತಕ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು  ಪ್ರತಿಪಾದಿಸಿದರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ  ಶರಣ ಸಂಸ್ಕೃತಿ ಉತ್ಸವ–2026ರ ಕಾರ್ಯಕ್ರಮದ ಅಂಗವಾಗಿ ಬಸವ ಮೀಡಿಯಾ ಹಾಗೂ ಬಸವಪರ ವಿವಿಧ ಸಂಘಟನೆಗಳ ಸಹಯೋಗದಲ್ಲಿ  ಜರುಗಿದ ಎರಡು ದಿನಗಳ ಕಾಲ ವಿಚಾರ ಸಂಕಿರಣ ನಾಲ್ಕನೇ ಗೋಷ್ಠಿಯ “ಎಂ.ಎಂ. ಕಲಬುರ್ಗಿ ನಂತರದ ಲಿಂಗಾಯತ ಧರ್ಮ: ಸಂಶೋಧನೆ ಸಾಧ್ಯತೆಗಳು ಮತ್ತು ಸವಾಲುಗಳು” ವಿಷಯದ ಕುರಿತು ನೆಲ ಮೂಲ ಸಂಸ್ಕೃತಿಯ ಚಿಂತಕರಾದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅವರು  ಮಾತನಾಡಿದರು.
ಬಸವಣ್ಣನವರ ಲಿಂಗಾಯತ ಧರ್ಮವು ಪ್ರಕೃತಿಧರ್ಮ, ಮಾನವಧರ್ಮ ಹಾಗೂ ಜಾತ್ಯತೀತ ಧರ್ಮವೆಂಬ ಅವರ ಪ್ರತಿಪಾದನೆ ಕೇವಲ ಧಾರ್ಮಿಕ ನಿಲುವಲ್ಲ; ಅದು ಸಮಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಮಾನವೀಯ ಘೋಷಣೆ ಎಂದು ಹೇಳಿದರು.

ವೈದಿಕ ಪರಂಪರೆ ವೇದಗಳನ್ನು ಧರ್ಮದ ಮೂಲವೆಂದು ಪ್ರತಿಪಾದಿಸಿದರೆ, ಬಸವಣ್ಣನವರು “ದಯವೇ ಧರ್ಮದ ಮೂಲ” ಎಂಬ ಜೀವಪರ ತತ್ವವನ್ನು ಸಾರಿದರು ಎಂದರು.                   ಪುರಾಣದ ಕಲ್ಪನೆಗಳಿಗಿಂತ ಬದುಕಿನ ವಾಸ್ತವಗಳಿಗೆ ಆದ್ಯತೆ ನೀಡಿದ ಈ ಚಿಂತನೆಯೇ ಶರಣ ಚಳವಳಿಯ ವೈಚಾರಿಕ ಶಕ್ತಿ. ಬಸವಣ್ಣನವರು ಮಾದಾರ ಚೆನ್ನಯ್ಯನವರನ್ನು ತಮ್ಮ ತಂದೆಯೆಂದು ಗೌರವಿಸಿದ ಪರಂಪರೆಯಾಗಲಿ, ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಜಾತಿವ್ಯವಸ್ಥೆಗೆ ಸವಾಲೆಸೆದ ಧೈರ್ಯವಾಗಲಿ—ಇವೆಲ್ಲವೂ ಮನುಸ್ಮೃತಿಯ ವರ್ಣಶ್ರೇಷ್ಠತೆಯ ಕಲ್ಪನೆಗಳಿಗೆ ನೀಡಿದ ಪ್ರಬಲ ಪ್ರತಿರೋಧದ ಸಂಕೇತಗಳು ಎಂದು ವಿವರಿಸಿದರು.

ಅದೇ ರೀತಿ, ದಾಸ-ವ್ಯಾಸ ಪರಂಪರೆಯ ನಡುವೆಯೇ ನಿಂತು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಪುರೋಹಿತಶಾಹಿ ಮತ್ತು ಸಾಮಾಜಿಕ ಅಸಮಾನತೆಗಳನ್ನು ಪ್ರಶ್ನಿಸಿದರು. ಅವರ ಕಾಗಿನೆಲೆ ಆದಿಕೇಶವನ ಅಂಕಿತದ ಹಿಂದೆ ಜನಪರ ಪ್ರಜ್ಞೆ ಮತ್ತು ಸಮಾನತೆಯ ಹಂಬಲ ಅಡಗಿದೆ. ಉಳ್ಳವರ ಅಧಿಕಾರದ ಸಂಕೇತಗಳನ್ನೂ, ಶ್ರಮಜೀವಿಗಳ ಬೆವರಿನ ಮೌಲ್ಯವನ್ನೂ ಮುಖಾಮುಖಿಯಾಗಿಸಿ ತೋರಿದ ಕನಕದಾಸರ ಚಿಂತನೆಯೇ ನಿಜವಾದ ‘ಕನಕ ಪ್ರಜ್ಞೆ’ಯಾಗಿದೆ ಎಂದು ತಿಳಿಸಿದರು.
ಬುದ್ಧನ ಸಂಘದ ಸಮಾನತೆಯ ಆಶಯ, ಬಸವಣ್ಣನವರ ಅನುಭವ ಮಂಟಪದ ಸಂವಾದ ಪರಂಪರೆ ಹಾಗೂ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ದೃಷ್ಟಿಕೋನ ಇವುಗಳ ನಡುವೆ ಮಾನವ ಘನತೆ ಮತ್ತು ಬಹುಜನ ಹಿತದ ಜೀವಂತ ಸಂಬಂಧವಿದೆ ಎಂಬುದನ್ನು ತಮ್ಮ ಮಾತುಗಳ ಮೂಲಕ ಪರಿಣಾಮಕಾರಿಯಾಗಿ ನೆನಪಿಸಿದರು. ಅನುಭವ ಮಂಟಪವು ಪ್ರಶ್ನಿಸುವ, ಚರ್ಚಿಸುವ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಪರಂಪರೆಯ ಸಂಕೇತವಾದರೆ, ಆಧುನಿಕ ಸಂಸತ್ತು ಜನರ ಆಶೋತ್ತರಗಳಿಗೆ ಧ್ವನಿಯಾಗಬೇಕಾದ ಪ್ರಜಾಪ್ರಭುತ್ವದ ವೇದಿಕೆಯಾಗಿದೆ.
ರಾಷ್ಟ್ರಕ್ಕೆ ‘ಜನಗಣಮನ’ ಮತ್ತು ‘ವಂದೇ ಮಾತರಂ’, ಕರ್ನಾಟಕಕ್ಕೆ ‘ಜಯ ಭಾರತ ಜನನಿಯ ತನುಜಾತೆ’ ಹಾಗೂ ರೈತರ ಶ್ರಮವನ್ನು ಕೊಂಡಾಡುವ ‘ಉಳುವ ಯೋಗಿಯ ನೋಡಲ್ಲಿ’ ಗೀತೆಗಳಿವೆ. ಹಾಗೆಯೇ, ಜನರ ನಿತ್ಯಜೀವನದ ನೈತಿಕ ಮೌಲ್ಯಗಳನ್ನು ಪ್ರತಿನಿಧಿಸುವ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ” ಎಂಬ ಬಸವಣ್ಣನವರ ವಚನವೇ ಜನಗೀತೆಯಾಗಬೇಕೆಂಬ ವೇದಿಕೆಯ ಮೂಲಕ ಡಾ. ಸೋಸಲೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.          ಜನರ ಭಾಷೆಯಲ್ಲಿರುವ ಈ ವಚನದಲ್ಲಿ ಪ್ರಾಮಾಣಿಕತೆ, ಅಹಿಂಸೆ, ನೈತಿಕತೆ ಮತ್ತು ಮಾನವೀಯ ಬದುಕಿನ ಸಾರ ಅಡಕವಾಗಿದೆ.
ವಚನಗಳು ಕೇವಲ ಪೂಜಿಸುವುದಕ್ಕಲ್ಲ, ಬದುಕಿನಲ್ಲಿ ಅಳವಡಿಸಿಕೊಳ್ಳುವುದಕ್ಕೆ; ಬಸವಣ್ಣ ಕೇವಲ ಆರಾಧನೆಗಲ್ಲ, ಆಚರಣೆಗೆ; ಧರ್ಮ ಕೇವಲ ಸಂಪ್ರದಾಯಕ್ಕಲ್ಲ, ಸಮಾನತೆಯ ಬದುಕಿಗೆ ಎಂಬ ಸಂದೇಶವನ್ನು ನೀಡಿದರು.                      ಗೋಷ್ಠಿಯಲ್ಲಿ  ಈ ಹಕ್ಕೊತ್ತಾಯಕ್ಕೆ ಸಮಿತಿಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿರುವುದು, ಜನರ ಧ್ವನಿಗೆ ಮನ್ನಣೆ ದೊರೆಯಬೇಕೆಂಬ ನಿಮ್ಮ ಒಡಲಾಳದ ಆಶಯಕ್ಕೆ ಸಂದ ಗೌರವವಾಗಿದೆ. ಇದು ಕೇವಲ ಒಂದು ವಚನವನ್ನು ಜನಗೀತೆಯನ್ನಾಗಿಸುವ ಪ್ರಸ್ತಾಪವಲ್ಲ; ಜನರ ಬದುಕಿನ ಮೌಲ್ಯಗಳಿಗೆ ಸಾಂಸ್ಕೃತಿಕ ಮಾನ್ಯತೆ ದೊರಕಬೇಕೆಂಬ ಪ್ರಜಾಸತ್ತಾತ್ಮಕ ಆಶಯವಾಗಿದೆ.
ಬಸವತತ್ವವನ್ನು ವೇದಿಕೆಯಲ್ಲಿ ಉಲ್ಲೇಖಿಸುವುದಕ್ಕಿಂತ ಜನಜೀವನದಲ್ಲಿ ಅನುಷ್ಠಾನಗೊಳಿಸುವುದೇ ನಿಜವಾದ ಶರಣ ಸಂಸ್ಕೃತಿ ಎಂದು ಡಾ. ಸೋಸಲೆ ಪ್ರತಿಪಾದಿಸಿದರು.                                          ಸಾನಿಧ್ಯ ವಹಿಸಿದ್ದ  ಚಿತ್ರದುರ್ಗ ಶ್ರೀ ಛಲವಾದಿ ಗುರು ಪೀಠದ ಶ್ರೀ ಬಸವನಗಿದೇವ ಶರಣರು ಅವರು ಮಾತನಾಡಿ, ಡಾ. ಚಿನ್ನಸ್ವಾಮಿ ಸೋಸಲೆ ಅವರು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಬಸವಣ್ಣನವರ ಕಳಬೇಡ ಕೊಲಬೇಡ ವಚನ ಜನರ ಗೀತೆ ಮಾಡಬೇಕು ಎನ್ನುವ ಬೇಡಿಕೆ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೋಷ್ಠಿಯ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ, ಡಾ. ಸಿ. ಕೆ ನಾವಲಗಿ, ಡಾ. ಸಣ್ಣ ವೀರಪ್ಪ ದೊಡ್ಮನಿ, ಡಾ. ಅಕ್ಕಿ ಬಸವೇಶ, ಎಸ್ ಬಸವರಾಜ್ ಮಾವಿನಹಳ್ಳಿ, ಡಾ. ಟಿ. ಹೆಚ್ ಬಸವರಾಜ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *