ಅನುದಿನ ಕವನ-೨೦೦೬, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಬುದ್ಧನಂತಾಗಲು

ಬುದ್ಧನಂತಾಗಲು

ಮಾಂಸದಂಗಡಿಯಲ್ಲಿ ತೂಗುವ
ತೊಟ್ಟಿಕ್ಕುವ ರಕ್ತದ ಜೀವವಿಲ್ಲದ
ಪ್ರಾಣಿಯ ಕಂಡು ಆಸೆಯಿದ್ದರೂ
ಹಸಿದ ಹೊಟ್ಟೆಗೆ ಮೋಸಮಾಡು
ಎಂದು ಬುದ್ಧ ನನಗೆ ಹೇಳಿಕೊಟ್ಟಿಲ್ಲ

ಅಷ್ಟೇ ಏಕೆ ನನ್ನ ತಪ್ಪಿಲ್ಲದಿದ್ದರೂ
ಶಿಕ್ಷೆಯ ಸರಪಳಿಯಲ್ಲಿ ನನ್ನನ್ನು
ನೀವು ಬಂಧಿಸಲು ಮುಂದಾದರೆ
ಮುದ್ರೆ ಹಿಡಿದು ಧ್ಯಾನಕ್ಕೆ ಜಾರು
ಎಂದೂ ಅವನು ನನಗೆ ಹೇಳಿಲ್ಲ

ಜಾತಿ ಪತ್ರವ ತೋರಿಸಿ ಕುತ್ತಿಗೆಯ
ಮಾಲೆಯ ಬದಲಿಸಿ ಊರುಕೇರಿ
ಮೆಚ್ಚಿಸಿ ಗೋಡೆಗಳ ನಡುವೆ ಪ್ರೀತಿಯ
ಕನಸ ಕಾಣುತ ನನ್ನನ್ನೇ ನಾ ಮರೆತು
ಜಗತ್ತಿನ ಕತ್ತಲನ್ನೆಲ್ಲಾ ಹೀರಿ ಕೊರಗಿ
ಕೂರಲೂ ಅವನು ನನಗೆ ಹೇಳಿಲ್ಲ

ನನ್ನೊಳಗಿನ ಬುದ್ಧ ಜಾತಿ ಮೀರಿದವನು
ಗುರುತನ್ನು ಎಂದೂ ಮೈಕೈಗಳ ಮೇಲೆ
ಮುದ್ರಿಸಿಕೊಳ್ಳದವನು ಅವನಿಗೆ ಹಸಿವೂ
ಗೊತ್ತು ಕ್ರೂರ ಹೇಡಿ ಮುಖವಾಡಗಳ
ಹೊತ್ತುಕೊಂಡು ನಗುವನ್ನು ಹಂಚುವವರ
ಕಂಡು ಮುನ್ನರಿಯುತ ದೇವನಾಗುವುದೂ….
ಗೊತ್ತು…

-ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು

Leave a Reply

Your email address will not be published. Required fields are marked *