ನ. 2ರಿಂದ ಮತ್ತೇ ಹೆಲ್ಮೆಟ್ ಕಡ್ಡಾಯ ಅಭಿಯಾನ: ಎಸ್. ಪಿ ಸುಮನ್ ಡಿ ಪನ್ನೇಕರ್

ಬಳ್ಳಾರಿ. ಅ. 28 : ನ. 2ರಿಂದ ಮತ್ತೇ ಹೆಲ್ಮೆಟ್ ಕಡ್ಡಾಯ ಅಭಿಯಾನ ಆರಂಭಿಸಲಾಗುವುದು ಎಂದು ಜಿಲ್ಲಾ  ಎಸ್. ಪಿ ಸುಮನ್ ಡಿ ಪನ್ನೇಕರ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,  ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿತ್ತು.  ಈ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತು ಹೆಲ್ಮೆಟ್ ಧರಿಸುವುದನ್ನು ರೂಢಿಯಾಗಿಸಿಕೊಂಡಿದ್ದರು.  ನಂತರ ಪೊಲೀಸರಿಂದ ಹೆಲ್ಮೆಟ್ ತಪಾಸಣೆ ಕಡಿಮೆ ಆಗಿದ್ದರಿಂದ ನಗರ ಪ್ರದೇಶಗಳಲ್ಲಿ ಹೆಲ್ಮೆಟ್ ಧರಿಸುವ ವಾಹನ ಸವಾರರ ಸಂಖ್ಯೆ ಕಡಿಮೆಯಾಗಿರುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ದಾಖಲಾದ ಅಪಘಾತ ಪ್ರಕರಣಗಳನ್ನು ಪರಿಶೀಲಿಸಲಾಗಿ ಬಹುತೇಕ ಪ್ರಕರಣಗಳಲ್ಲಿ ಮೃತರು ಹಾಗೂ ಗಾಯಾಳುಗಳು ಹೆಲ್ಮೆಟ್ ಧರಿಸದೇ ಇರುವುದರಿಂದ ತಲೆಗೆ ಪೆಟ್ಟಾಗಿ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದಾಖಲಾಗಿ ಮೃತಪಟ್ಟರುವುದು ಹಾಗೂ ಗಂಭೀರ ಸ್ವರೂಪದ ಗಾಯಗಳಾಗಿರುವುದು ಕಂಡು ಬಂದಿರುತ್ತದೆ. ಇತ್ತೀಚೆಗೆ ಅಂದರೆ ಅ. 15 ರಂದು  16 ವರ್ಷದ ವಿದ್ಯಾರ್ಥಿ ಚೇತನ ನಿರುಗುಪ್ಪ ರಸ್ತೆಯ ಕುರಿಹಟ್ಟಿ (ಎನ್.ಹೆಚ್. 150(ಎ) ಮೋಟಾರ್ ಸೈಕಲ್ ನ್ನು ನಿರ್ಲಕ್ಷತನದಿಂದ ಚಾಲನೆ ಮಾಡಿ ಆಯತಪ್ಪಿ ರಸ್ತೆ ವಿಭಜಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬಿದ್ದ ಪರಿಣಾಮ ತಲೆಯಲ್ಲಿ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಯಲ್ಲಿ ಗುಣಮುಖವಾಗದೆ ಮೃತಪಟ್ಟಿರುತ್ತಾನೆ. ಇದೇ ರೀತಿ  ಅನೇಕ ಅಪಘಾತ ಪ್ರಕರಣಗಳಲ್ಲಿ ಸಾವು-ನೋವು ಸಹ ಉಂಟಾಗಿರುತ್ತವೆ.

ವಾಹನ ಸವಾರರ ಅಮೂಲ್ಯ ಪ್ರಾಣ ಹಾಗೂ ಅಪಘಾತಗಳಿಂದ ಉಂಟಾಗುವ ಅಂಗ ವೈಕಲ್ಯತೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇದೇ ನ. 2ರಿಂದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಹಾಗೂ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.  ಹೆಲ್ಮೆಟ್ ಧರಿಸಿದೆ ಇರುವವರಿಗೆ ಮತ್ತು ಅಪ್ರಾಪ್ತ ವಯಸ್ಸಿನ ಚಾಲಕರ ಪೋಷಕರಿಗೆ ದಂಡವನ್ನು ವಿಧಿಸಲಾಗುವುದು ಎಂದು ಜಿಲ್ಲಾ ಎಸ್ ಪಿ ಸುಮನ್ ಡಿಪನ್ನೇಕರ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.  ಹಾಗೂ ಸಾರ್ವಜನಿಕರು  ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯ ಜೀವನವನ್ನು ಕಾಪಾಡಿಕೊಳ್ಳಲು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *