ಬರವಣಿಗೆಯಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ -ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಎನ್.

ಬಳ್ಳಾರಿ, ನ.11: ವೈಚಾರಿಕ ಚಿಂತನೆಯ ಬರಹಗಳಿಗೆ ಸಮಾಜದಲ್ಲಿ ಮಹತ್ವದ ಬದಲಾವಣೆ ತರುವ ಸಾಮರ್ಥ್ಯ ಇರುತ್ತದೆ. ಜಗತ್ತಿನ ಅನೇಕ ದೇಶಗಳ ಕ್ರಾಂತಿಗೆ ಇಂತಹ ಚಿಂತನೆಯ ಕಿಡಿಗಳು ಕಾರಣವಾವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಎನ್. ಅವರು ಹೇಳಿದರು.

ಜಲ್ಲೆಯ ಸಂಡೂರು ತಾಲ್ಲೂಕು ತಾಳೂರು ಗ್ರಾಮದ ನಾರಿಹಳ್ಳದ ದಂಡೆಯಲ್ಲಿ ಅಂಕುರ ಪ್ರಕಾಶ ಮತ್ತು ಲೋಹಿಯಾ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ  ಎರಡು ಪುಸ್ತಕಗಳನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು ಸಾಹಿತಿ-ಪತ್ರಕರ್ತ ಚಂದ್ರಕಾಂತ ವಡ್ಡು ಅವರ “ಹತ್ತು… ಮತ್ತೊಂದು!” ಕಥಾಸಂಕಲನದ ಬಗ್ಗೆ ಒಳನೋಟ ಬೀರಿದರು.

ಹೈಕೋರ್ಟ್ ವಕೀಲ ಅನಿಕೇತನ ಸುವ್ವಿ ರಚಿಸಿದ “ಲೀಗಲ್ ಪರ್ಸನಾಲಿಟೀಸ್: ಲೈಫ್ ಅಂಡ್ ಲೆಸೆನ್ಸ್” ಕೃತಿ ಕುರಿತು ಬಳ್ಳಾರಿಯ ವಿ.ಎಸ್.ಆರ್. ಕಾನೂನು ಕಾಲೇಜಿನ ಪ್ರಾಧ್ಯಾಪಕಿ ರಿನಿ ಸಿದ್ಧರಾಮೇಶ್ವರ ಗಟ್ಟಿನ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಮಾಜವಾದಿ ಸಿ.ಚನ್ನಬಸವಣ್ಣ ಅವರು ಮಾತನಾಡಿ ಇಬ್ಬರೂ ಲೇಖಕರ ಮೂಲ ಹಳ್ಳಿಯ ನಾರಿಹಳ್ಳದ ಪರಿಸರದಲ್ಲಿ ಈ ಪುಸ್ತಕಗಳು ಜನಾರ್ಪಣೆ ಆಗುತ್ತಿರುವುದು ಅರ್ಥಪೂರ್ಣ ಎಂದು ವಿವರಿಸಿದರು.

ಸಂಡೂರಿನ ಪರಿಸರ ತಜ್ಞ ಮೂಲಿಮನಿ ಈರಣ್ಣ ಅವರನ್ನು ಗೌರವಿಸಿ ಪುಸ್ತಕಗಳನ್ನು ಅರ್ಪಿಸಲಾಯಿತು.

ಇದೇ ಸಂದರ್ಭದಲ್ಲಿ ವಡ್ಡು, ತಾಳೂರು, ತೋರಣಗಲ್ಲು ಗ್ರಾಮಗಳ ಹವ್ಯಾಸಿ ಕಲಾವಿದರು ಬಯಲಾಟದ ಸಂಭಾಷಣೆಗಳನ್ನು ಹೇಳುವ ಮೂಲಕ ಸಭಿಕರನ್ನು ರಂಜಿಸಿದರು.

Leave a Reply

Your email address will not be published. Required fields are marked *