
ಬಳ್ಳಾರಿ,ನ.11: ಹದಿನೆಂಟನೆ ಶತಮಾನದಲ್ಲಿದ್ದ ಚಿತ್ರದುರ್ಗದ ಪಾಳೆಯಗಾರರ ಇತಿಹಾಸದಲ್ಲಿ ವೀರ ವನಿತೆ ಒನಕೆ ಓಬವ್ವಳ ಶೌರ್ಯ ಸ್ಮರಣೀಯವಾಗಿದೆ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋಟೆಯ ರಕ್ಷಣೆಗಾಗಿ ಒನಕೆಯನ್ನು ಆಯುಧವನ್ನಾಗಿ ಬಳಸಿಕೊಂಡು, ಹೈದರಾಲಿ ಸೈನ್ಯದ ಸೈನಿಕರನ್ನು ಒಬ್ಬೊಬ್ಬರಾಗಿ ಸದೆಬಡಿದು ಕೋಟೆಯನ್ನು ಕಾಪಾಡಿದ ಕಾವಲುಗಾರನ ಹೆಂಡತಿ ಸಾಮಾನ್ಯ ಮಹಿಳೆ ಒನಕೆ ಓಬವ್ವ ಎಂದು ಕೊಂಡಾಡಿದರು.

ಒನಕೆ ಓಬವ್ವ ಅವರ ತವರುಮನೆ ಅಖಂಡ ಬಳ್ಳಾರಿ ಜಿಲ್ಲೆಯ ಗುಡೇಕೋಟೆಯಾಗಿರುವುದು ನಮ್ಮೆಲ್ಲರ ಹೆಮ್ಮೆ. ಐತಿಹಾಸಿಕ ಸಾಹಸದಿಂದಾಗಿ ‘ವೀರ ವನಿತೆ’ ಎಂದು ಪ್ರಸಿದ್ಧಿ ಪಡೆದಿದ್ದಾರೆ ಎಂದು ತಿಳಿಸಿದರು.
ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯು ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ಹಾಗೂ ಮಹಿಳಾ ಹಕ್ಕುಗಳಿಗಾಗಿ ಶ್ರಮಿಸಿದೆ. ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾ ಫುಲೆ ದಂಪತಿಗಳು ಮಹಿಳೆಯರಿಗೆ ಶಿಕ್ಷಣ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮಹಾನ್ ವ್ಯಕ್ತಿಗಳು ಮತ್ತು ವೀರ ವನಿತೆಯರ ಆದರ್ಶಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಅದೇರೀತಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಮುಂತಾದವರು ಕನ್ನಡ ನಾಡಿಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಪೋರ್ಚುಗೀಸರ ಹಾಗೂ ಇತರರ ವಿರುದ್ಧ ಧೀರ ಹೋರಾಟ ನಡೆಸಿದರು ಎಂದು ಸ್ಮರಿಸಿದ ಅವರು, ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ಶಿಕ್ಷಣದಿಂದ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ರಾಜ್ಯದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಇಂದು ಕೋಟ್ಯಂತರ ಮಹಿಳೆಯರ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಿವೆ. ಸಂಪ್ರದಾಯದ ಗಡಿಗಳನ್ನು ಮೀರಿ, ತಮ್ಮ ಸ್ವಂತ ಕಾಲ ಮೇಲೆ ನಿಲ್ಲಲು ಈ ಯೋಜನೆಗಳು ಹೆಣ್ಣುಮಕ್ಕಳಿಗೆ ದೊಡ್ಡ ಶಕ್ತಿ ತುಂಬುತ್ತಿವೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ, ಕಂಪ್ಲಿಯ ಶಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಣ್ಣ ಪರಮೇಶ್ವರ್ ಅವರು, ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯದ ಹಿತದೃಷ್ಟಿಯಿಂದ ದೇಶದ ಇತಿಹಾಸ ಮತ್ತು ಸಂವಿಧಾನದ ಅರಿವು ಅತ್ಯವಶ್ಯಕವಾಗಿದೆ. ಕನ್ನಡ ನಾಡು ಮತ್ತು ದೇಶದ ಇತಿಹಾಸದಲ್ಲಿ ಹಲವು ಸಂಸ್ಥಾನಗಳ ಆಳ್ವಿಕೆಯ ಹಿನ್ನೆಲೆಯಿದ್ದು, ಹಲವು ನಾಯಕರ ಪಾತ್ರ ಮತ್ತು ಆಡಳಿತದ ಕೊಡುಗೆ ದೊಡ್ಡದಿದೆ ಎಂದು ಹೇಳಿದರು.
ಅಖಂಡ ಬಳ್ಳಾರಿ ಜಿಲ್ಲೆಯ ಗುಡೇಕೋಟೆಯ ಚಿನ್ನಮ್ಮ ಮತ್ತು ಚಿನ್ನಪ್ಪ ದಂಪತಿಯ ಪುತ್ರಿ ಒನಕೆ ಓಬವ್ವಳನ್ನು ಚಿತ್ರದುರ್ಗ ಕೋಟೆ ಕಾಯುವ ಕಹಳೆ ಮುದ್ದ ಹನುಮಪ್ಪ ಅವರಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು ಎಂದು ವಿವರಿಸಿದರು.
ಹೈದರಾಲಿ ಸೇನೆಯು ಚಿತ್ರದುರ್ಗದ ಕೋಟೆಯ ಮೇಲೆ ಗುಪ್ತ ಮಾರ್ಗವನ್ನು ಬಳಸಿ ಕೋಟೆಯೊಳಗೆ ನುಸುಳಲು ಪ್ರಯತ್ನಿಸಿತು. ಆ ಕಿಂಡಿಯ ಮೂಲಕ ರಹಸ್ಯವಾಗಿ ನುಸುಳುತ್ತಿದ್ದ ಶತ್ರು ಸೈನ್ಯವನ್ನು ಓಬವ್ವ ಒಬ್ಬರೇ ಎದುರಿಸಿದರು. ಈ ಐತಿಹಾಸಿಕ ಶೌರ್ಯವು ದೇಶದ ಸ್ವಾತಂತ್ರ್ಯ ಮತ್ತು ರಕ್ಷಣಾ ಹೋರಾಟದಲ್ಲಿ ಕನ್ನಡಿಗರ ಗಟ್ಟಿತನ ಹಾಗೂ ವೀರ ಮಾತೆಯರ ಸಾಹಸಕ್ಕೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಗನಕಲ್ಲಿನ ಉಷಾ ತಂಡದವರು ಸುಗಮ ಸಂಗೀತ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ಶಿವಕುಮಾರ್, ಹಿರಿಯ ಸಾಹಿತಿಗಳಾದ ಎನ್.ಡಿ ವೆಂಕಮ್ಮ, ಡಾ.ವೆಂಕಟಯ್ಯ ಅಪ್ಪಗೆರೆ, ಮುಖಂಡರಾದ ಸುಂಕಪ್ಪ, ಪತ್ರಕರ್ತರಾದ ಸಿ. ಮಂಜುನಾಥ್, ಸಿರಿಗೇರಿ ಶಿವರಾಮ್, ಎಸ್. ಕಿನ್ನೂರೇಶ್ವರ್ ಸೇರಿದಂತೆ ಸಮಾಜದ ಮುಖಂಡರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಸ್ವಾಗತಿಸಿದರು. ಪತ್ರಕರ್ತ ಡಾ. ಗಿರೀಶಕುಮಾರ ಗೌಡ ನಿರೂಪಿಸಿ ವಂದಿಸಿದರು.
—–
