ದಸಾಪದಿಂದ ಸಂವಿಧಾನ ದಿನಾಚರಣೆ: ಸಂವಿಧಾನ ಭಾರತೀಯರ ಸಮಾನತೆಯ ಬೆಳಕು – ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್

ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್

ಬಳ್ಳಾರಿ, ನ.27: ಸಂವಿಧಾನ ಪ್ರಜಾಪ್ರಭುತ್ವದ ಆತ್ಮ ಎಂದು ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಅವರು ಹೇಳಿದರು.                                                           ದಲಿತ ಸಾಹಿತ್ಯ ಪರಿಷತ್ತು  ರಾಜ್ಯ ಘಟಕ ಮತ್ತು ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಸಂಜೆ ನಗರದ ಕೆ.ಇ.ಬಿ. ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನ ಭಾರತೀಯರ ಸಮಾನತೆಯ ಬೆಳಕು ಮಾತ್ರವಲ್ಲ ನ್ಯಾಯದ ದಾರಿದೀಪ ಎಂದು ತಿಳಿಸಿದರು.
ಸಂವಿಧಾನದ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವವನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎಂದು ಹೇಳಿದರು.


ದಲಿತ ಸಾಹಿತ್ಯ ಸಮಾಜದಲ್ಲಿ ಶತ ಶತಮಾನಗಳಿಂದ ಬೇರೂರಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಶೋಷಣೆ ತಾರತಮ್ಯದ ವಿರುದ್ಧ
ಮತ್ತು ಸಾಮಾಜಿಕ ಅನ್ಯಾಯಕ್ಕೆ ಒಳಗಾದ ತಳ ಸಮುದಾಯದ ಜನರ ನೋವು, ಅನುಭವ, ಹೋರಾಟ, ಬದುಕು ಮತ್ತು ಸ್ವಾಭಿಮಾನವನ್ನು ಅಭಿವ್ಯಕ್ತಿಸಿದೆ ಎಂದು ವಿಶ್ಲೇಷಿಸಿದರು.
ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಸಮಾನತೆ, ಶಿಕ್ಷಣ, ಸಂಘಟನೆ, ಹೋರಾಟದ ವಿಚಾರಧಾರೆ ದಲಿತ ಸಾಹಿತ್ಯಕ್ಕೆ ಪ್ರಮುಖ ಪ್ರೇರಣೆ ಯಾಗಿದೆ ಎಂದು ತಿಳಿಸಿದರು.
ದಲಿತ-ಬಂಡಾಯ ಸಾಹಿತ್ಯಕ್ಕೆ ನಾಡೋಜ ದೇವನೂರು ಮಹಾದೇವ, ಡಾ. ಸಿದ್ದಲಿಂಗಯ್ಯ, ಡಾ. ಬರಗೂರು ರಾಮಚಂದ್ರಪ್ಪ, ಡಾ. ಅರವಿಂದ‌ಮಾಲಗತ್ತಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ. ಕುಂ. ವೀರಭದ್ರಪ್ಪ ಮತ್ತು ಬಿ.ಟಿ. ಲಲಿತಾ ನಾಯಕ್ ಅವರ ಕೊಡುಗೆ ಅನನ್ಯ ಎಂದು ಶ್ಲಾಘಿಸಿದರು.

ಡಾ.ಅರ್ಜುನ್ ಗೊಳಸಂಗಿ                     

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ವಿದ್ವಾಂಸ ಡಾ. ಅರ್ಜುನ ಗೊಳಸಂಗಿ ಅವರು ವಿಶ್ವದಲ್ಲೇ ಶ್ರೇಷ್ಠವಾದ ದೇಶದ ಸಂವಿಧಾನ ಎಲ್ಲಾ ಭಾರತೀಯರ ಪವಿತ್ರ‌ ಧರ್ಮ ಗ್ರಂಥ ಎಂದು ಕೊಂಡಾಡಿದರು.
ಸ್ವಾತಂತ್ರ್ಯ ಬಂದು ಎಂಬತ್ತು ವರ್ಷಗಳಾದರೂ ಬಲಿಷ್ಠ ಸಂವಿಧಾನವಿದ್ದರೂ ದೇಶದಲ್ಲಿ ದೀನ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರೆದಿರುವುದು ಆಳುವ ಸರಕಾರಗಳ ವೈಪಲ್ಯ ಎಂದು ಟೀಕಿಸಿದರು.
ದೇಶ, ರಾಜ್ಯದಲ್ಲಿ ದಲಿತರ ಸ್ಥಿತಿ ಪಲ್ಲಕ್ಕಿ ಹೋರುವುದೇ ಆಗಿದೆ ಎಂದು ವಿಷಾಧಿಸಿದ ಡಾ. ಗೊಳಸಂಗಿ ಅವರು ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ದಲಿತರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುವುದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ನೂರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷತೆಗೆ ದಲಿತ ಸಾಹಿತಿಗಳನ್ನು ಆಯ್ಕೆ ಮಾಡದೇ ಇರುವ ಕ್ರಮವನ್ನು ದಸಾಪ ಬಹಿರಂಗವಾಗಿ ಟೀಕಿಸಿದಾಗ ಮುಂದೆ ಡಾ. ಸಿದ್ದಲಿಂಗಯ್ಯ ಅವರನ್ನು ಆಯ್ಕೆಮಾಡಿತು ಎಂದು ಮಾರ್ಮಿಕವಾಗಿ ಹೇಳಿದರು.
ದಸಾಪ ರಾಜ್ಯದ 31 ಜಿಲ್ಲೆಗಳಲ್ಲಿ ಘಟಕಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ. ಈವರೆಗೆ 11 ಅಖಿಲಭಾರತ ದಲಿತ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿಯಲ್ಲೂ ಸಮ್ಮೇಳನ ಆಯೋಜಿಸುವ ಆಶಯವನ್ನು ವ್ಯಕ್ತಪಡಿಸಿದರು.

ಪ್ರೊ.ರಾಮಕೃಷ್ಣ ಹೆಚ್

ಅಧ್ಯಕ್ಷತೆ ವಹಿಸಿದ್ದ ಎಸ್ ಎಸ್ ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-೧ ಪ್ರಾಚಾರ್ಯ ಪ್ರೊ. ರಾಮಕೃಷ್ಣ ಹೆಚ್. ಅವರು ಮಾತನಾಡಿ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ‌ ಸ್ವೀಕರಿಸಲು ಸಂವಿಧಾನ ಶಿಲ್ಪಿ  ಡಾ. ಬಿ ಆರ್ ಅಂಬೇಡ್ಕರ್ ಅವರೇ ತಮಗೆ ಸ್ಫೂರ್ತಿ ಎಂದರು.
ಸ್ವಚ್ಛ, ಮಾದರಿ ಆಡಳಿತ ನಡೆಸುವ ಮೂಲಕ ತಮ್ಮ ಸಮಾಜಕ್ಕೆ ಕೀರ್ತಿ, ಗೌರವ ತರುತ್ತೇನೆ ಎಂದು ತಿಳಿಸಿದರು.

ಡಾ. ಚಂದ್ರಕಾಂತ್ ಕೆ.ಎಂ

ದಸಾಪ ಸಿರುಗುಪ್ಪ ತಾಲೂಕು ಘಟಕದ ಅಧ್ಯಕ್ಷ, ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಕಾಂತ ಕೆ.‌ಎಂ. ಅವರು ವಿಶೇಷ ಉಪನ್ಯಾಸ ನೀಡಿದರು.
ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ.‌ಟಿ.‌ದುರುಗಪ್ಪ, ವಿಸ್ ಕೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ.‌ರಾಜೇಂದ್ರ ಪ್ರಸಾದ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸಂಗನಕಲ್ಲು ವಿಜಯಕುಮಾರ್, ಉಪನ್ಯಾಸಕ
ಡಾ. ಹನುಮೇಶ್ ಜೋಳದರಾಶಿ, ದಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಸಿ. ಮಂಜುನಾಥ, ದಲಿತ ಮುಖಂಡ ಹುಸೇನಪ್ಪ ಮತ್ತಿತರರು ಮಾತನಾಡಿದರು.


ಅಭಿನಂದನೆ: ಇದೇ ಸಂದರ್ಭದಲ್ಲಿ ಮುಂಡ್ರಿಗಿ ನಾಗರಾಜ್, ಕರ್ನಾಟಕ ರಾಜ್ಯ ಆದಿ
ಜಾಂಬವ ನಿಗಮದ ನಿರ್ದೇಶಕ ಸಿದ್ದೇಶ್,
ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ನಿಗಮದ ನಿರ್ದೇಶಕ ಹುಸೇನಪ್ಪ ಅವರನ್ನು ದಸಾಪ ಜಿಲ್ಲಾ ಘಟಕದ ಪರವಾಗಿ ಗಣ್ಯರು ಅಭಿನಂದಿಸಿ ಗೌರವಿಸಿದರು.
ದಸಾಪ ಜಿಲ್ಲಾಧ್ಯಕ್ಷ ಡಾ. ನಾಗಪ್ಪ‌ಬಿ. ಇ ಅವರು ಸಂವಿಧಾನ‌ ಪೀಠಿಕೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ಬಾಪೂಜಿ‌ನಗರ ಈರಣ್ಣ, ವಿಶ್ರಾಂತ ಶಿಕ್ಷಣ ಸಂಯೋಜಕ ನಾಗಪ್ಪ, ಮುಖಂಡ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.


ಕ್ರಾಂತಿ ಗೀತೆ: ನಗರದ ಚಿಗುರು ಕಲಾ ತಂಡದ ಅನುಮಯ್ಯ ಮತ್ತಿತರರು ಕ್ರಾಂತಿ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು.

ಉಪನ್ಯಾಸಕ ಮಲ್ಲಿಕಾರ್ಜುನ ಶಂಕರಬಂಡೆ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಸಿ‌. ಮಂಜುನಾಥ ನಿರೂಪಿಸಿದರು.
ಉಪನ್ಯಾಸಕ. ಎ.ಕೆ.‌ಮಾರೆಪ್ಪ, ಯುವ ಸಂಘಟಕ ಮುಂಡ್ರಿಗಿ ಅರುಣ್ ಕುಮಾರ್ ನಿರ್ವಹಿಸಿದರು. ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು ವಂದಿಸಿದರು.
*****

Leave a Reply

Your email address will not be published. Required fields are marked *