ಅನುದಿನ ಕವನ-೯೦ ಕವಿ: ಸಿದ್ಧರಾಮ‌ ಕೂಡ್ಲಿಗಿ ಕವನದ ಶೀರ್ಷಿಕೆ: ಗಜಲ್

ಗಜಲ್

ನಿನ್ನನೆಷ್ಟು ಪ್ರೀತಿಸುತಿರುವೆನೆಂದು ನಿನಗೇನು ಗೊತ್ತು
ನಿನ್ನನೆಷ್ಟು ಉಸಿರಾಡುತಿಹೆನೆಂದು ನಿನಗೇನು ಗೊತ್ತು

ಕಡಲ ತಡಿಯ ಮರಳಿನೊಲು ಹರಡಿಹುದು ನಿನ್ನೊಲವು
ಅಲೆಯಾಗಿ ಎಷ್ಟು ಸಲ ತಬ್ಬಿಹೆನೆಂದು ನಿನಗೇನು ಗೊತ್ತು

ಪ್ರತಿ ಗಿಡದ ಚಿಗುರು ಹೂಹಣ್ಣುಗಳಲಿ ಅಡಗಿರುವೆ ನೀನು
ಜೀವಸೆಲೆಯಾಗಿ ಎಷ್ಟು ಚಿಮ್ಮಿಹೆನೆಂದು ನಿನಗೇನು ಗೊತ್ತು

ಬೆಳಕಿಗೇ ಬೆಳಕಾಗಿಹುದು ನಿನ್ನೆದೆಯ ಪ್ರೀತಿಯ ಚಿಲುಮೆ
ಭವ ಬಂಧನಗಳೆಷ್ಟು ತೊರೆದಿಹೆನೆಂದು ನಿನಗೇನು ಗೊತ್ತು

ಪ್ರೇಮಕಾಗಿ ಸಿದ್ಧ ಎಷ್ಟು ಅಲೆದಾಡಿಹನೆಂದು ಲೆಕ್ಕವಿಲ್ಲ
ನನ್ನೆದೆಯ ಪ್ರತಿ ಮಿಡಿತವೂ ನೀನೆಂದು ನಿನಗೇನು ಗೊತ್ತು

-ಸಿದ್ಧರಾಮ ಕೂಡ್ಲಿಗಿ
*****

Leave a Reply

Your email address will not be published. Required fields are marked *