ಶಿಕ್ಷಣ ಸಚಿವ ನಾಗೇಶ್‌ ಹೇಳಿಕೆಯಿಂದ ಸರ್ಕಾರದ ನಿರ್ಲಕ್ಷ್ಯ ಬಟಾ ಬಯಲು: ಪೃಥ್ವಿ ರೆಡ್ಡಿ ತರಾಟೆ

ಬೆಂಗಳೂರು, ಸೆ.16: ರಾಜ್ಯದಲ್ಲಿ ಬರೋಬ್ಬರಿ 47 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ಹಾಗೂ ಶಾಲೆಗಳಲ್ಲಿ 24 ಸಾವಿರ ಕೊಠಡಿಗಳ ಕೊರತೆ ಇರುವುದನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದು, ಶಿಕ್ಷಣ ಕ್ಷೇತ್ರದ ಬಗ್ಗೆ ಸರ್ಕಾರದ ತೀವ್ರ ನಿರ್ಲಕ್ಷ್ಯ ಇದರಿಂದ ಸಾಬೀತು ಪಡಿಸಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.


ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೃಥ್ವಿ ರೆಡ್ಡಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ರವರು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 47 ಸಾವಿರ ಹುದ್ದೆಗಳು ಖಾಲಿ ಇರುವುದನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ ಕೇವಲ 15 ಸಾವಿರ ಹುದ್ದೆಗಳಿಗೆ ಮಾತ್ರ ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರದ ಪ್ರಕ್ರಿಯೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ದೊಡ್ಡ ದಾಖಲೆ ಎಂದು ಸಚಿವರು ಸುಳ್ಳು ಹೇಳಿದ್ದಾರೆ.
ಸಚಿವರು ಈ ಹೇಳಿಕೆಯು ಎರಡು ದಶಕಗಳ ಹಿಂದೆ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರಿಗೆ ಮಾಡಿದ ಅಪಮಾನ ಎಂದು ಸಚಿವ ನಾಗೇಶ ಅವರನ್ನು ಕುಟುಕಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲದಿರುವುದು ಕೂಡ ಬೆಳಕಿಗೆ ಬಂದಿರುವುದು‌ ನೋವಿನ‌ ಸಂಗತಿ. . ಶಿಕ್ಷಕರ ಕೊರತೆಯಿಂದಾಗಿ ಈಗಿರುವ ಶಿಕ್ಷಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ವ್ಯತ್ಯಯ ಉಂಟಾಗಿ ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆಯಲ್ಲೂ 40% ಭಷ್ಟಾಚಾರ ನಡೆಯುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ. ಸರ್ಕಾರ ನಿರ್ಮಿಸಲಿರುವ ಶಾಲಾ ಕೊಠಡಿಗಳ ಕಾಮಗಾರಿಗಳಲ್ಲಿ ಕೂಡ ಅಕ್ರಮ ನಡೆಯುವ ಸಾಧ್ಯತೆಯಿದೆ ಎಂದು ದೂರಿದ್ದಾರೆ.
ಆಮ್‌ ಆದ್ಮಿ ಪಾರ್ಟಿಯಿಂದ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯವೆಂಬುದನ್ನು ಪಕ್ಷವು ದೆಹಲಿಯಲ್ಲಿ ತೋರಿಸಿಕೊಟ್ಟಿದೆ. ದೆಹಲಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಮೂಲಸೌಕರ್ಯಗಳಿದ್ದು, ಹಲವು ಸರ್ಕಾರಿ ಶಾಲೆಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳಿವೆ ಎಂದು ರೆಡ್ಡಿ ಅವರು ಉದಾಹರಿಸಿದ್ದಾರೆ.
ಸ್ಮಾರ್ಟ್‌ ತರಗತಿಗಳು, ಈಜುಕೊಳಗಳು, ದೇಶಭಕ್ತಿ ಪಠ್ಯಕ್ರಮ, ಬ್ಯುಸಿನೆಸ್‌ ಬ್ಲಾಸ್ಟರ್ಸ್‌ ಯೋಜನೆ, ಶಿಕ್ಷಕರಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಮುಂತಾದ ಹಲವು ಸುಧಾರಣೆಗಳನ್ನು ದೆಹಲಿ ಸರ್ಕಾರ ತಂದಿದೆ. ಅಲ್ಲಿನ ಕೆಲವು ಸರ್ಕಾರಿ ಶಾಲೆಗಳಿಗೆ ಹೋದರೆ ಪಂಚತಾರಾ ಹೋಟೆಲ್‌ಗೆ ಹೋದ ಅನುಭವವಾಗುತ್ತದೆ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಗೆ ದೆಹಲಿ ಶಿಕ್ಷಣ ಇಲಾಖೆಯ ಸಾಧನೆಯ ಶೇ. 1ರಷ್ಟು ಸುಧಾರಣೆ ತರಲೂ ಸಾಧ್ಯವಾಗಿಲ್ಲ ಎಂದು ಪೃಥ್ವಿ ರೆಡ್ಡಿ ವ್ಯಂಗವಾಡಿದ್ದಾರೆ.
*****

Leave a Reply

Your email address will not be published. Required fields are marked *