ಕಾವ್ಯ ಕಹಳೆ-೦೩, ಕವಿ: ಡಾ ವೈ ಎಂ .ಯಾಕೊಳ್ಳಿ, ಸವದತ್ತಿ ಕವನದ ಶೀರ್ಷಿಕೆ:ಹಳತಾದ ಯುಗಾದಿಯ ದಿನಕೊಂದು ಹೊಸಹಾಡು

ಹಳತಾದ ಯುಗಾದಿಯ ದಿನಕೊಂದು ಹೊಸಹಾಡು

ಇಲ್ಲದ ಹೊಸತನು
ತರಬೇಕು ಎಲ್ಲಿಂದ
ಹಳೆಯ ಪದಗಳ ನಡುವೆ
ಹಾಡದು ಹುಟ್ಟೀತು ಎಲ್ಲಿಂದ

ಬೆಲ್ಲಕಿಂತ ಬೇವೇ ಅಧಿಕ
ಈಗ ಎಲ್ಲಿಯ ಯುಗದ ಆದಿ
ಬೆಲ್ಲವನಷ್ಟೇ ಅಲ್ಲ
ಬೇವನೂ ಕೂಡ ಕೊಂಡು ತರಬೇಕಿದೆ
ಹೊಸತಿಗೆಲ್ಲಿಯ ಹಾದಿ


ತಲೆಗೆ ಹಚ್ಚಿದ ಎಣ್ಣೆಯ ಜಿಡ್ಡು
ಪೂರ್ತಿ ತೊಳೆಯಲಿಲ್ಲ
ನೀರು ಅರ್ಧ ಬಂದು
ಮೇಲೆ ಟ್ಯಾಂಕಿನ ನಲ್ಲಿ
ಎಲ್ಲೊ ಒಡೆದಿದೆಯಂತೆ
ಮಾಲಿಕನದು ಒಂದೆ ಸಮ ವರಾತು

೩ .
ಕೈಚೀಲ ಹಿಡಿದು ಪೇಟೆಗೆ
ಹೊರಟ ಕವಿ
ಪೇಟೆಯಲ್ಲಿ ನಡೆದಿತ್ತು
ಯುಗಾದಿ ಕವಿಗೋಷ್ಠಿ
ಕವಿತೆ ಓದುತ್ತಿದ್ದ ಕವಿಯತ್ರಿ
ನೋಡುತ್ತ ಹೊತ್ತು ಹೋಯ್ತು
ಪೂಜೆಗೆ ಕುಳಿತ ಯಜಮಾನಿ
ಸಿಟ್ಟು ನೆತ್ತಿಗೇರಿ
ದೇವರಿಗೆ ಬದಲು
ತಡವಾಗಿ ಬಂದ ಗಂಡನಿಗೆ
ಪೂಜೆ ಕಾದಿತ್ತು


ಮಾವು ತಳಿರನು ತುಂಬಿ
ತರಬೇಕಿದ್ದ ಲಾರಿ ಸ್ಟ್ರೈಕಿನ
ಕಾರಣ ತಡವಾಗಿದೆ ಬರುವದು
ಹರಿದು ಹಾಕಲಾದ
ಹಳೆಯ ತೋರಣಗಳಿಗೆ
ಹೊಸತು ಎಲೆಯನೆಲ್ಲಿಂದ
ಜೋಡಿಸುವದು


ಟೀ ವಿ‌ ಪರದೆಯ ಮೇಲೆ
ಚಿತ್ರ ನಟರದು ಅ್ಯಾಂಕರ್ ಗಳ
ಯುಗಾದಿ ಸಂಬ್ರಮ
ನೂರನೆಯ ಸಲ
ಹಳೆಯ ಹಾಡಿಗೆ ಕುಣಿವ ವಿಕ್ರಮ


ಯುಗಾದಿ ಕಳೆದರೂ
ಮರಳಿ ಬರುವ ಬೇಂದ್ರೆ
ಅಜ್ಜನ ಹಾಡು ಹಳತಾಗಿದೆ.
ಎಲ್ಲರನು ಹೊಸತು ಮಾಡುವ
ಯುಗಾದಿ ನಮ್ಮನಷ್ಟೇ
ಮರೆತಿರುವದು ನಿಜವಾಗಿದೆ


ಎಂದಿನಂತೆ ಎದ್ದ ಸೂರ್ಯ
ಯುಗಾದಿಯ ದಿನದಂದೂ
ನಿಗದಿತ ದಿನಕ್ಜೆ ಮುಳಗಿದ
ಹೊಸ ಹಬ್ಬದ ಶುಭಾಶಯ ಕೋರಿ
ಬಂದ ಹಳೆಯ ಗೆಳತಿಯ ಮೆಸೆಜುಗಳನಷ್ಟೇ
ನಾಜೂಕಾಗಿ.ಡಿಲಿಟು‌ ಮಾಡಿದ
ಕವಿ ದಿನ ಮುಗಿಸಿದ


ಎಲ್ಲದಿನಗಳಂತೆ ಯಾವ ಹೊಸತನು
ತರದೆ ದಿನವು ಎಂದಿನಂತೆ ಮುಗಿದೆ ಹೋಯ್ತು
ತಳಿರು ತೋರಣವಿಲ್ಲದ ದಿನ
ತಣ್ಣಗಾದ ಸಿಹಿ ಅಡುಗೆ ಮನೆಯಲ್ಲಿ
ಯುಗಾದಿಯನಾಚರಿಸಿಕೊಂಡಿತು

-ಡಾ ವೈ ಎಂ .ಯಾಕೊಳ್ಳಿ,  ಸವದತ್ತಿ

Leave a Reply

Your email address will not be published. Required fields are marked *