ಬಹುತ್ವ ಸಂಸ್ಕೃತಿಯ ಸಂಕೇತ ಮೊಹರಂ , ಬರಹ: ಸಿ.ಎಂ. ಫೈಝ್ ಮುಹಮ್ಮದ್, ಬೆಂಗಳೂರು

ಬಹುತ್ವ ಸಂಸ್ಕೃತಿಯ ಸಂಕೇತ ಮೊಹರಂ

ಕೂಡು ಬಾಳಿಗೆ ಕೇಡು ಬಗೆವ ಮನಸ್ಸು, ಬುದ್ಧಿಗಳು ಯುದ್ಧವನ್ನು ಪ್ರಚೋದಿಸುತ್ತಿರುವ ಈ ಹೊತ್ತಿನಲ್ಲಿ ಸೌಹಾರ್ದತೆ ಸಾಮರಸ್ಯದ ಸಿಹಿ ಬೆರೆಸಿ ನಾಡವರ ಬಾಳನ್ನು ಬೆಸೆಯುವ ಮೊಹರಂ ಹಬ್ಬವು ನಾಡಿನ ಬಹುತ್ವದ ಸಂಕೇತವಾಗಿದೆ. ಜಾತಿ ಮತ ಧರ್ಮಗಳ ಎಲ್ಲೆಗಳನ್ನು ಮೀರಿ ಮಾನವೀಯ ನೆಲೆಗಳನ್ನು ವಿಸ್ತರಿಸುವ ಮೊಹರಂ ಆಚರಣೆಗೆ ಸಾಂಸ್ಕೃತಿಕ ಮಹತ್ವವಿದೆ.

ಮೊಹರಂ ಹಿನ್ನೆಲೆ : ಮೊಹರಂ ಮೂಲತಃ ಶೋಕಸ್ಮರಣೆ. ಏಳನೇ ಶತಮಾನದಲ್ಲಿ ಮೊಹರಂ ತಿಂಗಳ ಹತ್ತನೇ ದಿನ ಕರ್ಬಲಾ ಮರುಭೂಮಿಯಲ್ಲಿ ನಡೆದ ಯುದ್ಧದಲ್ಲಿ ಮುಹಮ್ಮದ್‌ ಪೈಗಂಬರ್‌ರ ಮೊಮ್ಮಕ್ಕಳಾದ ಹಜರತ್‌ ಹಸನ್‌, ಹುಸೇನ್‍ ಮತ್ತವರ ಸಂಗಡಿಗರು ಯಜೀದನೆಂಬುವವನ ವಿರುದ್ಧ ಹೋರಾಡುತ್ತ ಪ್ರಾಣ ತ್ಯಾಗ ಮಾಡಿದರು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡಿರುವ ಈ ಇಬ್ಬರ ಹುತಾತ್ಮರ ಸ್ಮರಣೆಯಲ್ಲಿ ಮೊಹರಂ ಆಚರಿಸಲಾಗುತ್ತಿದೆ. ಆ ವೇಳೆಯಲ್ಲಿ ಕರ್ಬಲಾದಲ್ಲಿ ಹೋರಾಡುತ್ತ ಮಡಿದ ವೀರರ ತಲೆಗಳನ್ನು ಕಡಿದು ಮೆರವಣಿಗೆ ಮಾಡಲಾಯಿತು. ಎಷ್ಟೋ ಎಳೆಯ ಕಂದಮ್ಮಗಳು ಕುಡಿಯಲು ನೀರಿಲ್ಲದೇ ಅಸುನೀಗಿದರು. ಮಹಿಳೆಯರು ದುಃಖದಿಂದ ತೀವ್ರ ಸಂಕಟಪಟ್ಟರು. ಮಾನವ ಸಮಾಜವು ಎಂದೂ ಮರೆಯದ ಘೋರ ದಾರುಣ ಘಟನೆ ನಡೆದು ಹೋಯಿತು. ಇಂತಹ ದುಃಖದ ಸಂಕಟದ ಘಳಿಗೆಯ ನೆನಪಿನಲ್ಲಿ ಶುರುವಾದ ಧಾರ್ಮಿಕ ಆಚರಣೆಯು ಇಡೀ ನಾಡಿನ ತುಂಬ ಎಲ್ಲ ಜಾತಿ ಜನಾಂಗದವರ ಜೀವನದ ಭಾಗವಾಗಿ ರೂಪಾಂತರ ಪಡೆದಿರುವುದು ಸಾಂಸ್ಕೃತಿಕ ಅನನ್ಯತೆ ಹಾಗೂ ಬಹುತ್ವದ ಪ್ರತೀಕವಾಗಿದೆ.

ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯನ್ನು ಹಿಂದೂ ಮುಸ್ಲಿಂರು ಬೇಧವಿಲ್ಲದೆ ಆಚರಿಸುತ್ತಾರೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಎಲ್ಲ ಧರ್ಮದ ಜಾತಿಯ ಜನರು ಒಟ್ಟಾಗಿ ಒಳಗೊಳ್ಳುತ್ತಾರೆ.‌ ಇದು ಊರ ಊರಹಬ್ಬವಾಗಿದೆ. ಮುಸ್ಲಿಮರೇ ಇಲ್ಲದ ನೂರಾರು ಊರುಗಳಲ್ಲೂ ಮೊಹರಂ ಆಚರಿಸಲ್ಪಡುತ್ತದೆ. ಈ ಹಬ್ಬದಲ್ಲಿ ಹೆಜ್ಜೆಕುಣಿತ, ಕೋಡಂಗಿ ಕುಣಿತ, ಡಬಗಳ್ಳಿ ಕುಣಿತ, ಹುಲಿವೇಷ, ಮರಗಾಲು ಕುಣಿತ, ಅಚೊಳ್ಳಿ ಸೋಗು ಹಾಕುವ ಕಲಾವಿದರು ನಾನಾ ರೀತಿಯಲ್ಲಿ ಕುಣಿದು ಸಂಭ್ರಮಿಸುತ್ತಾರೆ. ಅಲ್ಲದೇ, ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ವೇಷಗಾರಿಕೆ,ಮೆರವಣಿಗೆ, ವಿಶೇಷ ಆಹಾರಗಳ ತಯಾರಿಕೆ ಮಾಡಿ ಅರ್ಪಿಸುವುದು ಮುಂತಾಗಿ ಆಚರಣೆಗಳು ಜಾರಿಯಲ್ಲಿವೆ.‌

ಹಾವೇರಿ, ಶಿಗ್ಗಾವಿ, ಸವಣೂರು, ಮುದ್ಗಲ್, ಕಲಬುರ್ಗಿ, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಬೀಳಗಿ ಸೇರಿದಂತೆ ನಾಡಿನ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ನಾನಾ ರೀತಿಯಲ್ಲಿ ಮೊಹರಂ ಆಚರಿಸುತ್ತಾರೆ.
ಮೊಹರಂ ಆಚರಣೆಯ ದಿನಗಳಲ್ಲಿ ಮುಸ್ಲಿಮೇತರರು ಲಾಡಿ ಧರಿಸಿ ಫಕೀರರಾಗುವ ಪದ್ಧತಿಯು ಇಂದಿಗೂ ರೂಢಿಯಲ್ಲಿದೆ. ಮುಸ್ಲಿಮೇತರ ಕುಟುಂಬಗಳು ಐದು ಜನ ಫಕೀರರಿಗೆ ಕರೆದು ಬಿನ್ನಹ ಮಾಡಿಸಿದ ನಂತರವೇ ತಾವು ಉಣ್ಣುವ ಪದ್ಧತಿ ಅನುಸರಿಸುವರು. ಹಬ್ಬದ ಪ್ರಯುಕ್ತ ಚೋಂಗೆ, ಮಾಲ್ದಿ ಎಂಬ ಸಿಹಿ ಅಡುಗೆ, ಶರಬತ್ತು
ಹಾಗೂ ಮೊಸರನ್ನ ಮೊದಲಾದ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ.

ಸಾಮಾನ್ಯ ಜನವರ್ಗ ತಂತಮ್ಮ ಜಾತಿ ಧರ್ಮಗಳನ್ನು ಮೀರಿ ಒಗ್ಗಟ್ಟಾಗಿ ಸೇರಿ ಆಚರಿಸುವ ಮೊಹರಂ ಆಚರಣೆಯು ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸ, ಸೌಹಾರ್ದತೆ ಸಾಮರಸ್ಯ ಕೂಡುಬಾಳಿನ ಕೊಂಡಿಯಂತಿದೆ.

ಜಾತಿ ಧರ್ಮಗಳ ಹೆಸರಿನಲ್ಲಿ ಕೋಮು ಸಂಘರ್ಷ, ಗಲಭೆ ಗಲಾಟೆ ಯುದ್ಧಗಳು ನಡೆಯುತ್ತಿರುವ ಈ ದುರಿತ ಕಾಲದಲ್ಲೂ ದಾರುಣತೆಯ ನೆನಪಿನಲ್ಲಿ ಆಚರಿಸಲ್ಪಡುತ್ತಿರುವ ಮೊಹರಂ ಮಾನವೀಯ ಪಸೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಸಂಕಟದ ನೆಪದಲ್ಲಿ ಸಾಮರಸ್ಯ ಸಂತೋಷದ ಕೂಡುಬಾಳಿಗೆ ಕೊಂಡಿಯಾಗಿದೆ.
(ಆಕರ : ರಹಮತ್ ತರೀಕೆರೆಯವರ ಕರ್ನಾಟಕದ ಮೊಹರಂ ಕೃತಿ)

-ಸಿ.ಎಂ. ಫೈಝ್ ಮುಹಮ್ಮದ್
ನಿರ್ದೇಶಕರು, ಹೆಚ್.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳು, ಬೆಂಗಳೂರು

Leave a Reply

Your email address will not be published. Required fields are marked *