ಅವಳು ಓಡುತ್ತಲೇ ಇರುತ್ತಾಳೆ..
ಒಮ್ಮೊಮ್ಮೆ ಗುರಿಯೆಡೆಗೆ..
ಒಮ್ಮೆಮ್ಮೆ ಬದುಕಿನೆಡೆಗೆ..
ಒಮ್ಮೊಮ್ಮೆ ಎಲ್ಲದರಿಂದ ದೂರ..
ಓಡುತ್ತಲೇ ಬಸವಳಿದವಳಿಗೆ
ಎದುರಿಗೆ ಬೆಟ್ಟ ಕಂಡರೆ ನಿರಾಳವೋ
ಪ್ರಪಾತ ಕಂಡರೆ ನಿರಾಳವೋ
ಎನ್ನುವ ಗೊಂದಲ ಮೂಡುತ್ತದೆ..
ಓಟ ಒಂದಿಷ್ಟು ಕ್ಲೀಷೆ ಮಾತುಗಳನ್ನೂ
ನೆನಪಿಸುತ್ತದೆ…
ಬದುಕೆಂದರೆ.. ಕೆಂಡದ ಮೇಲಿನ ನಡಿಗೆ,
ಮುಳ್ಳಿನ ಹಾದಿ, ಕಾಲದ ವಿರುದ್ದದ ಓಟ..
ಇನ್ನೂ ಏನೇನೋ..
ನೀತಿ ಅವಳಿಗೂ ಗೊತ್ತಿದೆ..
ಕೆಂಡವೋ, ಮುಳ್ಳೋ..
ನಿಂತಷ್ಟೂ ನೋವು ಹೆಚ್ಚು..
ಓಡುತ್ತಲೇ ಇರಬೇಕು…
ಬಳಲಿದಾಗ ಕನಿಷ್ಟ
ನಡೆಯುತ್ತಲಾದರೂ ಇರಬೇಕು,
ನಿಲ್ಲುವ ಆಯ್ಕೆಯ ಬದುಕು
ಕೊಡುವುದಿಲ್ಲ…
ಆಗಾಗ ಕುಸಿದು, ಬಾಯಾರಿ ಹಸಿದವಳಿಗೆ
ಬದುಕು ಅನ್ನವಿಕ್ಕುವ ಬದಲು
ಸುಡುಗೆಂಡವ ಮಡಿಲಿಗಿಡುತ್ತದೆ..
ಒಡಲಲ್ಲಿ ಬೆಂಕಿ ಹೊತ್ತವಳು
ಮತ್ತೆ ಎದ್ದು ಓಟ ಮುಂದುವರಿಸುತ್ತಾಳೆ..

– ಸಮುದ್ಯತಾ, ಬೆಂಗಳೂರು
