ನಾವು ಮಾತು ಬಿಟ್ಟ ದಿನ
ಆಕಾಶ ಶುಭ್ರವಾಗಿತ್ತು
ಸಂಜೆ ವೇಳೆಗೆ ಅಲ್ಲಲ್ಲಿ ತುಂತುರು
ಮಳೆ ಹನಿ ಅಂದ
ಹವಾಮಾನ ವಾರ್ತೆಯ ಹುಡುಗಿ
ಹೇಳಿದ ಮಾತಿನಲ್ಲಿ
ನನಗೇನು ನಂಬಿಕೆಯಿರಲಿಲ್ಲ..
ಇರುಳಲ್ಲಿ ತುಸು ಚಳಿ ಇತ್ತೇನೊ
ಆದರೆ ಮಲಗಬಹುದಿತ್ತು
ಫ್ಯಾನು ಹಾಕಿಕೊಂಡೆ
ಕನಸಿನಲ್ಲಿ ಯಾರೊ ಬರಬಹುದಿತ್ತು
ವಿಳಾಸ ಕೇಳಿಕೊಂಡು
ಅವರು ಮುಂದಿನವರ
ಕನಸಿಗಾದರೂ ಹೋಗಲಿ
ಎಂದು
ಹತ್ತು ನಿಮಿಷ ತಡವಾಗಿ ಮಲಗಿದೆ
ಹೊಳೆ ಹರಿಯುತ್ತಿತ್ತು ಹಾಗೆ ಸಣ್ಣಗೆ
ಉದುರಿದ್ದು
ಐದು ಎಲೆ, ಮೂರು ಹೂವು
ಬಿಡು
ಈ ಲೆಕ್ಕ ಇದೆ ಎಂದಿನಂತೆ..
ಬಾ ಇಲ್ಲಿ
ನೋಡು ಇದೊಂದು ಲೆಕ್ಕ ಬಿಡಿಸು
ಮಾತು ಬಿಟ್ಟ ಮೇಲೆ
ಈ ‘ಬಿಟ್ಟ ಮಾತುಗಳು’ ಎಲ್ಲಿ ಹೋಗುತ್ತವೆ?
ರಾಮ ಕಾಡಿಗೆ ಏಕೆ ಹೋದ?
ಕಮಲಳ ಲಂಗ ಯಾವ ಬಣ್ಣ?
ಇಂತದ್ದೆ ಪ್ರಶ್ನೆ-ಉತ್ತರಗಳನು
ಉರುಹೊಡೆದು ಬೆಳೆದ ಹುಡುಗಿಯೇ
ಗಾಬರಿಯಾ ಈ ಪ್ರಶ್ನೆಗೆ..?
ಮಾತುಗಳು ಹಾಗೆ ಉಳಿಯುತ್ತವೆಯೇ
ಮಾತು ಬಿಟ್ಟವರೆ ಬಳಿ
ನಾವು ಮಾತು ತೊರೆದಂತೆ
ಮಾತುಗಳೂ ಮನುಷ್ಯರನು
ತೊರೆಯುತ್ತವೆಯೇ..?
ಇನ್ನಷ್ಟು ಬೆಚ್ಚಬೇಡ ಮಾರಾಯ್ತಿ
ಇಲ್ಲೆಂತ ಲೆಕ್ಕವಿಲ್ಲ
ನೋಡಿಲ್ಲಿ
ಆಡಲು ಮಾತಿಲ್ಲ ಅಂದಾಗಲೇ
ಮುಗಿಯುತ್ತವೆ ಬಂಧಗಳು
ದಿನಸಿ ಖಾಲಿಯಾದ ಮೇಲೆ
ದುಖಾನಿನ ಬಾಗಿಲು ಮುಚ್ಚುವಂತೆ!
ಒಂದೊಂದು ಬಂಧಕ್ಕೂ ಇದೆ
ಒಂದಷ್ಟು ಪದಗಳ ದಾಸ್ತಾನು
ಅವು ಮುಗಿದ ಮೇಲೆ
ನಾನು ಯಾರೊ..
ಆಮೇಲೆ ನೀನು ಯಾರೊ..
ಉಳಿಯುವುದಿಷ್ಟೇ ಇಲ್ಲಿ
ಮಾತುಗಳು ಕಲೆ,
ಈ ಬದುಕು ಬರೀ ಮಾತುಗಳ ಕಲೆ!

-ಸದಾಶಿವ ಸೊರಟೂರು, ಶಿವಮೊಗ್ಗ
