ಮದ್ರಾಸ್ ವಿವಿಯಲ್ಲಿ ರಾಷ್ಟ್ರೀಯ ವಿಚಾರಸಂಕಿರಣ: ವಿಮರ್ಶಕ ಸಂಸ್ಕೃತಿಯ ಸಂರಕ್ಷಕ -ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್

ಚೆನ್ನೈ,ಸೆ.28: ವ್ಯಕ್ತಿಯ ಸಹಜಗುಣ ವಿಮರ್ಶಿಸುವುದಾಗಿದೆ. ವ್ಯಕ್ತಿ, ವಸ್ತು ಮತ್ತು ಸಂದರ್ಭದ ಗುಣದೋಷಗಳನ್ನು ವಿವೇಚಿಸುವ ಮನೋಧರ್ಮವೇ ವಿಮರ್ಶೆ. ಇದು ಜೀವನದ ವ್ಯಾಖ್ಯಾನವಾದ ಸಾಹಿತ್ಯದ ವ್ಯಾಖ್ಯಾನ ವಿಮರ್ಶೆ ಯಾಗಿರುತ್ತದೆ. ವಿಮರ್ಶಕರು ಸಂಸ್ಕೃತಿಯ ಸಂರಕ್ಷಕರು ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಅಭಿಪ್ರಾಯಪಟ್ಟರು.
ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡವಿಭಾಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಮಿಳುನಾಡು ಘಟಕದ ಸಹಯೋಗದಲ್ಲಿ ಏರ್ಪಡಿಸಿದ ‘ಕನ್ನಡ ಸಾಹಿತ್ಯದ ಬಹುಮುಖತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಬಿಡುಗಡೆಯಾದ ‘ಬಹುಮುಖ’ ಕೃತಿಯ ಕುರಿತು ಅವರು ಮಾತಾಡಿದರು.
ನಲವತ್ತೊಂದು ವಿಮರ್ಶಾ ಲೇಖನಗಳಿರುವ ಈ ಕೃತಿಯಲ್ಲಿ ಸೀಮಾತೀತ ನೆಲೆಯಲ್ಲಿ ರೂಪಿತವಾಗಿರುವ ಲೇಖನಗಳಿವೆ. ಬರೀ ಟೀಕೆ ಟಿಪ್ಪಣಿಗಳಿಗೆ ವಿಮರ್ಶೆಯು ಸಾಧನವಲ್ಲ. ವಿಮರ್ಶೆಯು ಸಾಹಿತ್ಯದ ಸತ್ವತತ್ವಗಳನ್ನು ಅನಾವರಣಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಬಹುಮುಖದ ಲೇಖನಗಳಿವೆ ಎಂದು ತಿಳಿಸಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ದ್ರಾವಿಡಿಯನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶಾರದ ಅವರು ಸಾಹಿತ್ಯ ಮತ್ತು ವಿಮರ್ಶೆ ಬದುಕನ್ನು ಗಟ್ಟಿಗೊಳಿಸುವ ಸಾಧನಗಳು. ಸಾಹಿತ್ಯದ ಓದಿಗೆ ಪ್ರೇರೇಪಿಸುವ ಕೆಲಸವನ್ನು ವಿಮರ್ಶೆ ಮಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ತಮಿಳ್ ಸೆಲ್ವಿ ಅವರು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಅಪೂರ್ವವಾದ ಪರಂಪರೆಯಿದ್ದು ಈ ಕುರಿತು ಚಿಂತನಮಂಥನ ನಡೆಯಬೇಕು. ದ್ರಾವಿಡ ಭಾಷೆಗಳಾದ ಕನ್ನಡ ತಮಿಳು ನಡುವೆ ಅವಿಭಾಜ್ಯ ಬಾಂಧವ್ಯವಿದೆ. ಅನುವಾದದ ಮೂಲಕ ಎರಡು ರಾಜ್ಯಗಳ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ರಾಷ್ಟ್ರೀಯ ವಿಚಾರಸಂಕಿರಣದ ಸಂಚಾಲಕ ಡಾ.ಎಂ.ರಂಗಸ್ವಾಮಿ ಅವರು ಕನ್ನಡ ಮತ್ತು ತಮಿಳುನಾಡು ನಡುವೆ ಉತ್ತಮ ಬಾಂಧವ್ಯ ಬೆಸೆಯಬೇಕು. ಕೇರಳ, ಆಂದ್ರಪ್ರದೇಶದ, ತೆಲಂಗಾಣ, ತಮಿಳುನಾಡಿನ ವಿದ್ವಾಂಸರೆಲ್ಲ ಸೇರಿ ಕನ್ನಡ ಸಾಹಿತ್ಯದ ಬಹುಮುಖತೆಯನ್ನು ಕುರಿತು ಚರ್ಚಿಸುವ ಈ ಕಾರ್ಯಕ್ರಮವು ಸಾಮರಸ್ಯ ಮತ್ತು ಸೌಹಾರ್ದ ತೆಯನ್ನು ವೃದ್ಧಿಗೊಳಿಸುವುದು ಎಂದರು.
ಮೊದಲ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ರಾಣಿಚನ್ನಮ್ಮ ವಿ.ವಿ.ಯ ಡಾ.ಪಿ.ನಾಗರಾಜ್, ಮದ್ರಾಸ್‌ ಪ್ರಾಂತ್ಯದಲ್ಲಿ ಬೆಳೆದ ಕನ್ನಡ ಭಾಷೆ, ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು.
ಎರಡನೇ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಡಾ.ಹಾ.ಮ. ನಾಗಾರ್ಜುನ ಮಾತನಾಡಿ, ಕನ್ನಡ ವಿಮರ್ಶೆಯು ಕನ್ನಡ ಸಂಸ್ಕೃತಿಯನ್ನು ತಿಳಿಯಲು ನೆರವಾಗುತ್ತದೆ ಎಂದು ಹೇಳಿದರು.
ಡಾ. ಜಿ.ಎಸ್.ಅಶೋಕ, ರವಿ, ರವಿಚಂದ್ರ, ಹನುಮಾಕ್ಷಿ ಗೋಗಿ, ಪ್ರೇಮ, ಗಿರೀಶ್, ಡಾ.ಶಾರದಮ್ಮ, ಡಾ.ಮಲ್ಲಿಕಾರ್ಜುನ, ಡಾ.ಮುನಿರಾಜ್ ಮೊದಲಾದ ಇಪ್ಪತ್ತೈದು ಜನರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ಸಮಾರೋಪ ನುಡಿಗಳನ್ನು ಡಾ.ಚಂದ್ರಕಲಾ ಆಡಿದರು. ಡಾ. ಸೃಜೇಶ್ ಸ್ವಾಗತಿಸಿದರು. ಬೊಮ್ಮೇಗೌಡ ಅವರು ನಿರೂಪಿಸಿದರು.
*****

Leave a Reply

Your email address will not be published. Required fields are marked *