ಬಳ್ಳಾರಿ, ಏ.30: ಬಸವಾದಿ ಶರಣರೆಲ್ಲರ ವಚನ ತತ್ವ ಪ್ರಸಾರಕ್ಕಾಗಿ ಬಸವ ಸಂಗಮ ಎಂಬ ಹೆಸರಿನಡಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಪ್ರಮುಖ ಸ್ವಾಮೀಜಿಗಳಿಂದ, ಪ್ರವಚನಕಾರರಿಂದ ರಾಜ್ಯಮಟ್ಟದ ಪ್ರವಚನ ಕಾರ್ಯಕ್ರಮವನ್ನು ಶೀಘ್ರ ನಗರದಲ್ಲಿ ಏರ್ಪಡಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಬುಧವಾರ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಿದ್ದ 892ನೇ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಬಸವ ಜಯಂತಿಯ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಲಿಂಗಾಯತ ಸಮುದಾಯದ ಐಕ್ಯತೆಯನ್ನು ಪ್ರದರ್ಶಿಸಿಲಾಗಿದೆ ಎಂದು ತಿಳಿಸಿದರು.
ವಚನ ಹೇಳುವ ಮೂಲಕ ತತ್ವಾದರ್ಶದ ಬದುಕಿಗೂ ಸಿದ್ಧ, ಸಮಯ ಬಂದರೆ ಅಶ್ವಾರೂಢ ಬಸವಣ್ಣನ ಹಾಗೆ ಶರಣರ ರಕ್ಷಣೆಗೆ ಶಸ್ತ್ರ ಹಿಡಿಯಲು ಕೂಡ ಈ ಸಮಾಜ ಸಿದ್ಧ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಹೇಳಿದರು.
ಸಮಾಜಕ್ಕೆ ಕೊಟ್ಟ ಮಾತಿನಂತೆ ಅಶ್ವಾರೂಢ ಬಸವಣ್ಣನ ಪುತ್ಥಳಿ ಹಾಗೂ ವೃತ್ತ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ್ದೇವೆ, ಪುತ್ಥಳಿಯ ನಿರ್ಮಾಣಕ್ಕೆ ಜಾಗ ನೀಡಿದ ಗಡಿಗಿ ಹಾಗೂ ಅಲ್ಲಂ ಕುಟುಂಬದವರನ್ನು ಅಭಿನಂದಿಸುವೆ ಎಂದರು.
ವೀರಶೈವ ಲಿಂಗಾಯತ ಮಠಗಳಿಂದಾಗಿ ಇಂದು ರಾಜ್ಯದ ಲಕ್ಷಾಂತರ ಜನ ಸಾಕ್ಷರರಾಗಿದ್ದಾರೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯದ ಮಠಗಳ ಸ್ವಾಮೀಜಿಗಳು ಭಿಕ್ಷೆ ಬೇಡಿ ಎಲ್ಲ ಸಮುದಾಯದ ಜನರಿಗೆ ಶಿಕ್ಷಣ ನೀಡಿದ್ದಾರೆ, ಅದರಿಂದಾಗಿ ನಾವೆಲ್ಲ ಇಂದು ಬದುಕು ಕಟ್ಟಿಕೊಂಡಿದ್ದೇವೆ ಎಂದರು.
ನನ್ನ ಪತ್ನಿ ನಾರಾ ವೈಜಯಂತಿ ರೆಡ್ಡಿ ಅವರು ಕಿತ್ತೂರು ರಾಣಿ ಚೆನ್ನಮ್ಮ ಅಕ್ಷರ ದಾಸೋಹ ಸಂಘಟನೆಯನ್ನು ಆರಂಭಿಸಿದ್ದಾರೆ, ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ, ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡಲಿದ್ದಾರೆ, ನಿಮ್ಮೆಲ್ಲರ ಸಲಹೆ ಸಹಕಾರ ಮುಖ್ಯ ಎಂದರು. ಕೊಟ್ಟೂರುಸ್ವಾಮಿ ಮಠದ ಶ್ರೀ ಬಸವಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣ ಎಲ್ಲರಿಗೂ ಸೇರಿದ ವ್ಯಕ್ತಿ, ಎಲ್ಲಾ ಕೆಳ ವರ್ಗದ ಜನರನ್ನು ಮೇಲೆತ್ತಿದ ಮಹಾ ಮಹಿಮ ಎಂದು ಬಣ್ಣಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಬಳ್ಳಾರಿಯ ಬಸವೇಶ್ವರ ನಗರದಲ್ಲಿರುವ ರಾಷ್ಟ್ರೀಯ ಬಸವ ದಳದಲ್ಲಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಶಾಸಕರಾದ ಭರತ್ ರೆಡ್ಡಿ ಹಾಗೂ ಬಿ.ನಾಗೇಂದ್ರ ಪೂಜೆಯಲ್ಲಿ ಪಾಲ್ಗೊಂಡರು. ತದನಂತರ (ಕೆಇಬಿ ವೃತ್ತ) ಅಂದಾಜು 1.50 ಕೋಟಿ ರೂ.ಗಳ ಅನುದಾನದ ಅಡಿ ಬಸವೇಶ್ವರ ವೃತ್ತ ಹಾಗೂ ಅಶ್ವಾರೂಢ ಬಸವಣ್ಣನ ಪುತ್ಥಳಿಯ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನಡೆಸಲಾಯಿತು.ಬಳಿಕ ಬಸವೇಶ್ವರ ವೃತ್ತದಿಂದ ಗವಿಯಪ್ಪ ವೃತ್ತದವರೆಗೆ ಅದ್ಧೂರಿ ಬೈಕ್ ರ್ಯಾಲಿ ನಡೆಯಿತು. ಶಾಸಕರಾದ ನಾರಾ ಭರತ್ ರೆಡ್ಡಿ, ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ರ್ಯಾಲಿ ನಡೆಯಿತು, ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.ವೇದಿಕೆಯ ಮೇಲೆ ಮಾಜಿ ಮೇಯರ್ ಎಂ.ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ಮಿಂಚು ಶ್ರೀನಿವಾಸ್, ಸುರೇಖಾ ಮಲ್ಲನಗೌಡ, ಸಿರಿಗೆರೆ ಪನ್ನರಾಜ, ಅಲ್ಲಂ ಪ್ರಶಾಂತ್, ಚೋರನೂರು ಕೊಟ್ರಪ್ಪ, ಸಾಹುಕಾರ್ ಸತೀಶಬಾಬು, ಡಾ.ದರೂರು ಪುರುಷೋತ್ತಮಗೌಡ, ಡಾ.ಅರವಿಂದ ಪಟೇಲ್, ರಾಜಣ್ಣ, ಗೋನಾಳ ನಾಗಭೂಷಣಗೌಡ, ಮಿಂಚೇರಿ ನರೇಂದ್ರಬಾಬು, ಮಲ್ಲನಗೌಡ, ನಿಷ್ಟಿ ರುದ್ರಪ್ಪ, ತಿಮ್ಮನಗೌಡ, ಮೀನಳ್ಳಿ ಚಂದ್ರಣ್ಣ, ದರೂರು ಶಾಂತನಗೌಡ, ಯರಿಸ್ವಾಮಿ, ಯಾಳ್ಪಿ ಪಂಪನಗೌಡ, ರವಿಶಂಕರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಡೊಳ್ಳು ಬಾರಿಸಿ ಗಮನಸೆಳೆದ ಶಾಸಕ ರೆಡ್ಡಿ: ನಗರದ ಮುನುಸಿಪಲ್ ಹೈಸ್ಕೂಲಿನಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ಭಾಗಿಯಾದ ಶಾಸಕ ನಾರಾ ಭರತ್ ರೆಡ್ಡಿ, ಡೊಳ್ಳು ಬಾರಿಸಿ ಸಂಭ್ರಮಿಸಿದರು.