ಅನುದಿನ‌ ಕವನ-೧೬೨೯, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ:ಹಸಿವಿನ ಹೆಸರು ಕವಿತೆ

ಹಸಿವಿನ ಹೆಸರು ಕವಿತೆ

ನೋಡಿ ಈಗೀಗ ಕವಿತೆ
ಬರೆಯುವ ಮುನ್ನ
ಯೋಚಿಸುವ ಅಗತ್ಯವೇ
ಇರುವುದಿಲ್ಲ

ಏಕೆಂದರೆ ನಮ್ಮ ಕವಿತೆಗಳು
ಬಜಾ಼ರ್ ನಲ್ಲಿ ಹಲವು
ಪ್ರಕಾರವಾಗಿ ಅಡಮಾನಕ್ಕಿವೆ.

ಅಮಲಿನ ಕಡಲಿನಲ್ಲಿ
ತೇಲುವವರಿಗೆ ನಮ್ಮ
ಕವಿತೆಗಳು ಮದಿರೆಗಿಂತ
ಒಂದು ಪಟ್ಟು ಹೆಚ್ಚಾಗಿಯೇ
ನಶೆ ಏರಿಸುವಂತಿರಬೇಕು.

ದುಃಖದ ಕಣ್ಣುಗಳಿಗೆ
ನಮ್ಮ ಕವಿತೆಗಳು ಅವರ
ಕಣ್ಣೀರನ್ನು ಇಡೀ ದೇಹದಿಂದ
ಹೀರಿ – ಸೋಸುವಷ್ಟು
ಶಕ್ತಿಯುತವಾಗಿರಬೇಕು.

ಬಂದೂಕು ಹಿಡಿವ ಕೈಗಳು
ನಮ್ಮ ಕವಿತೆಗಳಲ್ಲಿ ಗುಂಡುಗಳು
ಹಿಮ ಗೆಡ್ಡೆಗಳಾಗುವಂತಹ
ಪರಿವರ್ತನಾ ಗುಣವನ್ನು
ಬಯಸುತ್ತವೆ.

ಇಲ್ಲಿ ಮನೆಯ ಸಂದಿ
ಗೊಂದಿಯನ್ನು ತಡಕಿ
ಹಾಳೆ ಪೆನ್ನು ಹಿಡಿದು
ಕವಿತೆ ಬರೆಯಲು ಕುಳಿತ
ನಮ್ಮ ತಲೆಯಲ್ಲಿ ಸದಾ
ಒಂದೇ ಯೋಚನೆ
ಇರುವ ಒಂದು ರೊಟ್ಟಿ
ಚೂರನ್ನು ಯಾವುದರಲ್ಲಿ
ಅದ್ದಿ ಹಸಿದ ನಾಲಗೆಯ
ಬಯಕೆಯನ್ನು ತೀರಿಸುವುದು
ಎಂದು…


-ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು
—–

Leave a Reply

Your email address will not be published. Required fields are marked *