
ಹೆಗಲ ಮೇಲೆ ಸದಾ
ಬಿಸಿಲಿನ ಟವಲ್ಲು ಹಾಕಿಕೊಂಡೇ
ಓಡಾಡುವ ಮನುಷ್ಯನಿಗೆ
ಅಷ್ಟೇನು ನಯಾ ನಜೂಕಿನ ಪರಿಚಯವಿಲ್ಲ,
ಒಂದು ಹಿಡಿ ನಗು
ಮೂರು ಹಿಡಿ ಆಸೀಮ ಕೋಪದ
ಮಿಶ್ರಣ
ಯಾರೊ ಪ್ರೀತಿಯಿಂದ
ಬಸಳೆ ಸೊಪ್ಪಿನ ದಂಟು ಕೊಟ್ಟಿದ್ದಾರೆ,
ವಾಕಿಂಗು ಹೋಗಿ ತಂದ
ಕೆರೆ ಮಣ್ಣಿನಲ್ಲಿ ಸುಮ್ಮನೆ ಹೀಗೆ ನೆಟ್ಟರೆ
ಸೊಂಪಾಗಿ ಬೆಳೆಯುತ್ತದೆಂಬ ನಂಬಿಕೆ
ಚುರ್ರನೆ ಸುಡುವ ಬಿಸಿಲ
ತಗ್ಗಿಸಲು ಎರಡು ತೆಂಗಿನ ಗರಿ ಜೋಡಿಸಿ
ಹಾಕಬೇಕು ಚಪ್ಪರ,
ಬೇಕಾದರೆ ಹೀರೆ ಬಳ್ಳಿಯೂ
ಹೀಗೆ ಹಬ್ಬಿಕೊಳ್ಳಲಿ
ಇನ್ನೊಂದೆರಡು ತಿಂಗಳಲ್ಲಿ
ಬೆಳೆಯುತ್ತದೆ
ಬೆಳಕನುಂಡು,
ಇಷ್ಟಗಲ ಎಲೆ, ರಸವತ್ತಾದ ದಂಟು
ರಾಗಿ ಮುದ್ದೆಗೆ ಹೇಳಿ ಮಾಡಿಸಿದ ಜೋಡಿ
ಹೀಗೀಗೇ ಹಬ್ಬಲೆಂಬ ಕಾರಣಕ್ಕೆ
ಹಾಗೊಂದು ದಾರ ಕಟ್ಟಿದ್ದಾಯ್ತು
ಅಚೀಚೆ ಹೋಗದಂತೆ,
ಕೂಸಿಗೆ ಎದೆ ಹಾಲು ಉಣಿಸಿದಂತೆ
ನೀರು ಹೊಯ್ಯುವಾಗ
ಅತ್ತ ರಫಿ ಸಾಹೇಬರು ಪ್ರೀತಿ ತುಂಬಿ ಹಾಡುತಿದ್ದಾರೆ
ಮಣ್ಣಿನ ಬಟ್ಟಲಲ್ಲಿ ಇಟ್ಟ ನೀರಿಗೆ
ಎರಡು ಚಿಟ್ಟಿಗುಬ್ಬಿಗಳು
ಮೈಯ ತೊಳೆದು ಮಾರಿ ತೊಳೆದು
ಖುಷಿಯಲಿದ್ದಾವೆ,
ಬೀಸಿದ ಸಣ್ಣ ಗಾಳಿಗೆ
ಹೊಯ್ದಾಡುತ್ತವೆ
ಹೂವಿನಂತೆ
ಇಂಥಾ ಬೇಸಿಗೆಗೆ
ಬಸಳೆ ಬದುಕೋದು ಕಷ್ಟ,
ಅದೇನಿದ್ದರೂ ಮಲೆನಾಡಿನ ಬಳ್ಳಿ
ಅಂತ ಯಾರೋ ಹೇಳಿದ್ದರಂತೆ
ಜೋಪಾನವಾಗಿ ಎಲೆ ಬಿಡಿಸಿ
ಪುಟ್ಟಿಗೆ ಇಳಿಬಿಡುತ್ತಾ
ಕುಂವೀ ನೆನಪಿಸಿಕೊಂಡರು
🍀🌹🎂ಹುಟ್ಟಿದ ದಿನದ ಶುಭಾಶಯಗಳು…. ಅಪ್ಪ🍀🌺🎂🍀💐

-ಪ್ರವರ ಕೊಟ್ಟೂರು
