ಅಲೆಮಾರಿ ನಿಗಮದ ಅಧ್ಯಕ್ಷ ಸ್ಥಾನದಿಂದ ಪಲ್ಲವಿ ಅವರನ್ನು ವಜಾಗೊಳಿಸಲು ಒತ್ತಾಯಿಸಿ ಬಳ್ಳಾರಿಯಲ್ಲಿ ಎಸ್‌ಸಿ, ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಪ್ರತಿಭಟನೆ

ಬಳ್ಳಾರಿ, ಜು.8: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಅಲೆಮಾರಿ ಸಮುದಾಯದವರ ಮೇಲಿನ ದೂರುಗಳನ್ನು ಹಿಂಪಡೆಯಬೇಕು. ಅವರ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಮಂಗಳವಾರ ಪ್ರತಿಭಟನೆ ನಡೆಸಿತು.
ಮಾಜಿ ಸಚಿವ ಹೆಚ್.ಆಂಜನೇಯಲು ನೇತೃತ್ವದಲ್ಲಿ  ಜು.5 ರಂದು ಬೆಂಗಳೂರಿನಲ್ಲಿ ಅಲೆಮಾರಿಗಳ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಗೆ 49 ಅಲೆಮಾರಿ ಸಮುದಾಯಗಳ ಮುಖಂಡರು, ರಾಜ್ಯಾಧ್ಯಕ್ಷರನ್ನು ಮಾತ್ರ ಆಹ್ವಾನಿಸಲಾಗಿತ್ತು. ಈ ವೇಳೆ ಆಹ್ವಾನ ಇಲ್ಲದಿದ್ದರೂ, ಏಕಾಏಕಿ ಸಭೆಗೆ ಬಂದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು, ವಿನಾಕಾರಣ ಗೊಂದಲವನ್ನು ಉಂಟು ಮಾಡಿದ್ದಾರೆ. ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ, ಸಭೆ ಆಯೋಜಿಸಿದ್ದ ಅಲೆಮಾರಿ ಸಮುದಾಯಗಳ ಮುಖಂಡರಿಗೂ ಬಾಯಿಗೆ ಬಂದಂತೆ ಮಾತನಾಡಿ ಅವಮಾನ ಮಾಡಿದ್ದಾರೆ. ಈ ವೇಳೆ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದ ಜಿ.ಪಲ್ಲವಿ ವಿರುದ್ಧ ಧ್ವನಿ ಎತ್ತಿದ್ದ ಅಲೆಮಾರಿ ಸಮುದಾಯದ ಏಳು ಜನ ಮುಖಂಡರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು, ಏಕಪಕ್ಷೀಯವಾಗಿ ಕೆಲಸ ಮಾಡಿರುವ ಕುರಿತು ನಮ್ಮ ಬಳಿ ದಾಖಲೆಗಳಿವೆ. ಹಾಗಾಗಿ ಕೂಡಲೇ ಜಿ.ಪಲ್ಲವಿ ಅವರನ್ನು, ನಿಗಮದ ಅಧ್ಯಕ್ಷ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು. ಮಾಜಿ ಸಚಿವ ಹೆಚ್.ಆಂಜನೇಯ ಮತ್ತು 49 ಅಲೆಮಾರಿ ಸಮುದಾಯಕ್ಕೂ ಬಹಿರಂಗ ಕ್ಷಮೆ ಯಾಚಿಸಬೇಕು. ಮುಖಂಡರಾದ ಬಸವರಾಜ ನಾರಾಯಣ್, ಲೋಹಿತಾಶ್ವ, ಚಾವಡೆ ಲೋಕೇಶ್, ವೀರೇಶ್, ಶಿವು, ಸುಭಾಶ್ ಚವ್ಹಾಣ್, ಶಾಂತಕುಮಾರ್ ಅವರ ಮೇಲಿನ ಸುಳ್ಳು ದೂರುಗಳನ್ನು ತಕ್ಷಣ ಹಿಂಪಡೆಯಬೇಕು. ನಿಗಮದ ಆವರಣದಲ್ಲೇ ಮಾಜಿ ಸಚಿವ ಹೆಚ್.ಆಂಜನೇಯ ಮತ್ತು 7 ಜನ ಮುಖಂಡರಿಗೆ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಒಂದು ವೇಳೆ ಕ್ಷಮೆಯಾಚಿಸದಿದ್ದಲ್ಲಿ ಬೆಂಗಳೂರಿನಲ್ಲಿ 49 ಅಲೆಮಾರಿ ಸಮುದಾಯಗಳು ಬೃಹತ್ ಪ್ರತಿಭಟನೆ ನಡೆಸಲಿವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.    ಕಲಾವಿದರು ಹಗಲುವೇಷ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ಪ್ರತಿಭಟನೆಯಲ್ಲಿ ಮಹಾಸಭಾದ ಎಸ್.ಎಂ.ಮಹೇಶ್, ಕೆ.ಶಂಕ್ರಪ್ಪ, ನಾಗಲಿಂಗ, ಸೀನು, ಎಂ.ಮಾರೆಪ್ಪ, ಕೆ.ಸತ್ಯಪ್ಪ, ಖಂಡಪ್ಪ, ಉಮೇಶ್, ಲಿಂಗಪ್ಪ, ಯಲ್ಲಪ್ಪ, ರಾಜಣ್ಣ, ರಾಜೇಶ್ ಸೇರಿದಂತೆ ಅಲೆಮಾರಿ ಸಮುದಾಯಗಳ ನೂರಾರು ಜನರು ಇದ್ದರು.
—–