ಕರ್ನಾಟಕದ ಏಕೀಕರಣ, ಕನ್ನಡ‌ನಾಡು ನುಡಿಯ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಅನನ್ಯ -ಕೊಪ್ಪಳ‌ವಿವಿ ಕುಲಪತಿ ಪ್ರೊ. ಬಿ.ಕೆ. ರವಿ

ಕೊಪ್ಪಳ: ಕರ್ನಾಟಕದ ಏಕೀಕರಣದಲ್ಲಿ ಹಾಗೂ ಕನ್ನಡ ನಾಡು, ಭಾಷೆ, ಸಾಹಿತ್ಯ ಕ್ಷೇತ್ರ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ‌. ರವಿ ಅವರು ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.                                  ಸಮಾಜದಲ್ಲಿ ಪತ್ರಕರ್ತರಿಗೆ ವಿಶೇಷ ಗೌರವವಿದೆ ಜತೆಗೆ ಸಮಾಜವನ್ನು ಅಭಿವೃದ್ಧಿ ಮಾಡುವ ಹೊಣೆಗಾರಿಕೆಯೂ ಇದೆ ಎಂದು ತಿಳಿಸಿದರು.

ಬರವಣಿಗೆ ಭಾಷೆ ನಾಶಪಡಿಸುವ, ಓದುಗರಲ್ಲಿ ಗೊಂದಲ ಮೂಡಿಸುವಂತಿರ ಬಾರದು.  ಜನರ ಭಾವನೆಗಳಿಗೆ ಧಕ್ಕೆಯಾಗದಂತಹ ವರದಿ ಮಾಡುವುದು ಪತ್ರಿಕೋದ್ಯಮದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.                  ಯುವ ಪತ್ರಕರ್ತರು ಉತ್ತಮ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.        ಆಧುನಿಕ ತಂತ್ರಜ್ಞಾನದಿಂದ ಮಾಧ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ನಿಕಾಯದ ಡೀನ್ ಪ್ರೊ.ವಿ.ಸುದೇಶ ಅವರು ಮಾತನಾಡಿ, ಪತ್ರಿಕೋದ್ಯಮ ಸಮಾಜದಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾದರೆ ಮುಕ್ತ ಪತ್ರಿಕಾ ಸ್ವಾತಂತ್ರ್ಯ ನೀಡುವುದು ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟರು.  ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಪತ್ರಿಕೋದ್ಯಮವು ಮಾಡುತ್ತಿದೆ. ಪ್ರತಿದಿನ ಸಂಶೋಧನಾತ್ಮಕವಾಗಿ ವಿಷಯಗಳನ್ನು ಅವಲೋಕಿಸಿ ಸಮಾಜದ ಮುಂದೆ ತೆರೆದಿಡಲು ಸಹಾಯಕವಾಗುತ್ತದೆ ಎಂದರು.                                                ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಸಾಮಾಜಿಕ ಅನ್ಯಾಯವನ್ನು ತೆರೆದಿಡುವವರೇ ಪತ್ರಕರ್ತರು. ಪತ್ರಕರ್ತರಿಂದ ಮಾನವ ಹಕ್ಕುಗಳ ರಕ್ಷಣೆ ಮಾಡುವ ಬರವಣಿಗೆಗಳು ಹಾಗೂ ಲೇಖನಗಳು ಹೆಚ್ಚು ಬರಲಿ ಎಂದು ಸಲಹೆ‌ ನೀಡಿದ ಅವರು,   ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಗಳನ್ನು ಹಾಗೂ ಸಿದ್ಧಾಂತಗಳನ್ನು  ಸಮಾಜಕ್ಕೆ ತಿಳಿಸಬೇಕು. ಪತ್ರಿಕೋದ್ಯಮದ ಹಾಗೂ ವಿವಿಧ ವಿಷಯಗಳ ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಇದರಿಂದ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಮತ್ತಷ್ಟು ಸಹಾಯಕವಾಗುತ್ತದೆ ಎಂದು ವಿವರಿಸಿದರು.

ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ.ನಿಂಗಜ್ಜ ಮಾತನಾಡಿ, ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವ ಒಂದು ನಾಣ್ಯದ ಎರಡು ಮುಖಗಳು ಎಂದು ಹೇಳಿದರು.                                          ಭಾರತದ ಸಂವಿಧಾನದಲ್ಲಿರುವ ಸಾರ್ವಭೌಮ ಸಮಾಜವಾದ ಸ್ವಾತಂತ್ರ್ಯ ಭ್ರಾತೃತ್ವದ ಭಾವನೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ಕನ್ನಡ ಪತ್ರಿಕೋದ್ಯಮ ದೇಶದ ಪತ್ರಿಕೋದ್ಯಮದಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿದೆ ಎಂದು ಶ್ಲಾಘಿಸಿದರು.                                          ಕನ್ನಡ ಪತ್ರಿಕೋದ್ಯಮ ಜನಸ್ನೇಹಿಯಾಗಿ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರೆ, ಅದಕ್ಕೆ ಕಾರಣ ಪತ್ರಕರ್ತರು. ಪತ್ರಕರ್ತರಿಗೆ ಅನೇಕ ಒತ್ತಡಗಳಿದ್ದರೂ ಸಮಾಜಕ್ಕೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.                                                      ಕೊಪ್ಪಳ ವಿಶ್ವವಿದ್ಯಾಲಯ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಹಂತ ಹಂತವಾಗಿ ಬೆಳೆಯುತ್ತಿದೆ. ವಿಶ್ವವಿದ್ಯಾಲಯಕ್ಕೆ ಒಂದು ಸ್ವಂತ ಕಟ್ಟಡವನ್ನು ಸರ್ಕಾರದ ಕಡೆಯಿಂದ ಮಂಜೂರು ಮಾಡಿಸಲು ಈ ಭಾಗದ ಶಾಸಕರು ಮತ್ತು ಸಚಿವರು ಧ್ವನಿ ಎತ್ತಬೇಕು ಎಂದರು.

ಇದೆ ವೇಳೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಕಲ್ಯಾಣ ವಾಣಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಗೊಳಿಸಿದರು.

ಕೊಪ್ಪಳ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ, ಸಿಂಡಿಕೇಟ್ ಹಾಗೂ ಆಕಾಡೆಮಿಕ್ ಕೌನ್ಸಿಲ್ ಸದಸ್ಯರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಾಪಕರಾದ ಸಂತೋಷಕುಮಾರ ಹೆಚ್ ಕೆ. ರಂಗನಾಥ್, ಶ್ರೀಕಾಂತ್, ವಿವಿಧ ವಿಭಾಗಗಳ ಅಧ್ಯಾಪಕರು, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.