ಅನುದಿನ ಕವನ-೧೭೦೭, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಒಲವಿಂದ ಮುಕ್ತನಾದೆ

ಒಲವಿಂದ ಮುಕ್ತನಾದೆ

ಒಲವೆ ನಿನ್ನಿಂದ ನನ್ನ ಕಳೆದುಕೊಂಡೆ
ನಾನೆ ಹೆಚ್ಚು ನಿನ್ನ ಪ್ರೀತಿಸಿದೆನೆಂಬ ಹುಚ್ಚು ಕಳಚಿಕೊಂಡೆ
ಒಲವೆ ನಿನ್ನಿಂದ ನನ್ನ ಪಡೆದುಕೊಂಡೆ
ನೀನೆ ಒಲವ ರೂಪವಾಗಿ ನನ್ನ ಕುರೂಪ ಕಳೆದುಕೊಂಡೆ

ಒಲವೆ ನನ್ನ ಅಜ್ಞಾನ ತೊಲಗಿಸಿದೆ
ಅರಿವಿನ ಜ್ಯೋತಿಯ ಬೆಳಗಿಸಿ ಜಗಕೆಲ್ಲ ಪರಿಚಯಿಸಿದೆ
ಒಲವೆ ನನ್ನ ಮಾತ್ಸರ್ಯ ಹಿಂಗಿಸಿದೆ
ಪ್ರೀತಿ ಪವಿತ್ರ ಧ್ಯಾನದಲ್ಲಿ ನಿಷ್ಕಾಮ ಯೋಗಿಯಾಗಿಸಿದೆ

ಒಲವೆ ನನ್ನ ಕೋಪ ಕೊನೆಯಾಗಿಸಿದೆ
ಸಂತಸ ಹೃದಯದಿ ನೆಲೆಯಾಗಿಸಿ ಹಸನ್ಮುಖಿಯಾಗಿಸಿದೆ
ಒಲವೆ ನನ್ನ ಸ್ವಾರ್ಥವ ತೀರಿಸಿದೆ
ಬರಿದೆ ಬಂದು ಒಲವೊಂದ ಹೊತ್ತ ತೃಪ್ತ ಬಯಲಾಗಿಸಿದೆ

ಒಲವೆ ನನ್ನ ಸೋಲುಗಳ ಸರಿಸಿದೆ
ಸ್ಪರ್ಧೆಯಲ್ಲ ಜೀವನ ಸಹಬಾಳ್ವೆಯ ಸಂಗಮವಾಗಿಸಿದೆ
ಒಲವೆ ನನ್ನ ಭಯವ ಹೋಗಿಸಿದೆ
ಪ್ರೀತಿಯಲ್ಲಿ ನೆಮ್ಮದಿಯ ಬದುಕನಿತ್ತು ಹೊನಲಾಗಿಸಿದೆ

ಒಲವೆ ನನ್ನ ಹಮ್ಮುಗಳ ಊಳಿದೆ
ಪ್ರಕೃತಿಯ ನಿರ್ಮಲ ತರಂಗದಿ ಸ್ವಚ್ಚಂದ ಗಾನವಾಗಿಸಿದೆ
ಒಲವೆ ನನ್ನ ದುರಾಸೆಗಳ ಅಳಿಸಿದೆ
ಬ್ರಹ್ಮಾಂಡದ ಅಣುವಲ್ಲಿ ತೃಣವಾಗಿಸಿ ಮುಕ್ತನಾಗಿಸಿದೆ

ಒಲವೆ ನಿನ್ನ ಸತ್ಸಂಗದಿ ಬದುಕಿದೆ
ಲೋಕದ ಜೀವಜಂತುಗಳ ಜೊತೆಗೆ ಬೆರೆತು ಜೀವಿಸಿದೆ
ಒಲವೆ ನೀನೆಂಬ ಸತ್ಯವನ್ನೆ ತಿಳಿದೆ
ಸಮಸ್ತ ನನ್ನನ್ನೆ ನಿನಗೆ ಸಮರ್ಪಿಸಿಕೊಂಡು ಹಗುರವಾದೆ

-ಟಿ.ಪಿ.ಉಮೇಶ್
ಸಾಹಿತಿಗಳು ಹೊಳಲ್ಕೆರೆ