
ಬಳ್ಳಾರಿ, ಅ.13: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಎ.ಆಸೀಫ್ ಅವರ ನೇತೃತ್ವದಲ್ಲಿ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು
ಸೋಮವಾರ ಸಂಜೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್ ಝುಬೇರ್ ಅವರನ್ನು ಭೇಟಿ ಮಾಡಿ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಗಣತಿದಾರರು ಹಾಗು ಮೇಲ್ವಿಚಾರಕರು ಎದುರಿಸುತ್ತಿರುವ ಕಿರುಕುಳ, ಮತ್ತಿತರ ಸಮಸ್ಯೆಗಳ ಕುರಿತಂತೆ ಚರ್ಚಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುವ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ಸಮೀಕ್ಷೆಯ ನೋಡಲ್ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಮುಖ ಬೇಡಿಕೆಯಂತೆ ಕಳೆದ ವಾರ ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತ್ತು ಮಾಡಿದ್ದ ಸಂಡೂರು ತಾಲ್ಲೂಕಿನ ಪ್ರೌಢ ಶಾಲಾ ಶಿಕ್ಷಕ ರಾಘವೇಂದ್ರ ಇವರ ಅಮಾನತು ಆದೇಶವನ್ನು ರದ್ದು ಪಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ತಿಪ್ಪಾರೆಡ್ಡಿ.ಜಿ .ವೈ , ಖಜಾಂಚಿ ಹನುಮಂತರಾಯ ,ರಾಜ್ಯ ಪರಿಷತ್ ಸದಸ್ಯರಾದ ಸುರೇಶ ಕುಮಾರ್ ,ಕಾರ್ಯಾಧ್ಯಕ್ಷರಾದ ಜಿ ಕೆ ರಾಮಕೃಷ್ಣ, ಹಿರಿಯ ಉಪಾಧ್ಯಕ್ಷರಾದ ಶರಣ ಬಸವ ,ವೀರೇಶ್ ಕುಮಾರ್ ,ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಪಂಪನಗೌಡ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್. ರಮೇಶ್ ,ಪ್ರೌಢ ಶಾಲಾ ಜಿಲ್ಲಾ ಅಧ್ಯಕ್ಷರಾದ ಭಾಸ್ಕರ ರೆಡ್ಡಿ , ಮುಖಂಡರಾದ ಹರಿಪ್ರಸಾದ್, ತಾಲೂಕು ಅಧ್ಯಕ್ಷರಾದ ಗಿರಿಮಲ್ಲ ಹಾಗೂ ಇತರೆ ವೃಂದ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
