ಗಜಲ್
ಬರೀ ದೊಂದಿಗಳೇ ಉರಿಯುತಿರುವಲ್ಲಿ ದೀಪಗಳ ಹುಡುಕುತಿರುವೆ
ಬರೀ ಒಣ ನೋಟಗಳೇ ಇರುವಲ್ಲಿ ಕಣ್ಬೆಳಕುಗಳ ಹುಡುಕುತಿರುವೆ
ಯಾರು ಯಾರೋ ಗೀಚುತಿರುವ ಹಾಳೆಯಲಿ ಸಿಕ್ಕುಗಳ ಗೋಜಲು
ಅರ್ಥವೇ ಇರದ ಪದಗಳ ಇರುವೆಡೆಯಲ್ಲಿ ಕವಿತೆಗಳ ಹುಡುಕುತಿರುವೆ
ಕತ್ತಲೆಯನೇ ತುಂಬಿಕೊಂಡಿರುವ ಮುಖಗಳಲ್ಲಿದೆ ಸೊನ್ನೆ ಭಾವಗಳು
ಖಾಲಿ ನೆರಳುಗಳೇ ಇರುವ ನೆಲವಿರುವಲ್ಲಿ ಶರೀರಗಳ ಹುಡುಕುತಿರುವೆ
ಜೀವಂತಿಕೆಯೇ ಇರದ ಕೊರಳ ದನಿಗಳಲೆಲ್ಲ ಮೊಳಗಿವೆ ಜೈಕಾರಗಳು
ಕೊಳೆತಿಹ ಶವಗಳೇ ನಿಂತಿರುವಲ್ಲಿ ಬಿಸಿಯುಸಿರುಗಳ ಹುಡುಕುತಿರುವೆ
ಉಳ್ಳವರ ಉಗುರುಗಳೊಳಗೆ ಒದ್ದಾಡುತಿಹವು ಚಿಟ್ಟೆಯ ಕನಸುಗಳು
ಸಾವಿಗೆ ಪತಂಗಗಳೇ ನಿಂತಿರುವಲ್ಲಿ ಸುಡದ ದೀಪಗಳ ಹುಡುಕುತಿರುವೆ

-ಸಿದ್ಧರಾಮ ಕೂಡ್ಲಿಗಿ
