ಕೂಡಿ ಕಟ್ಟಿದ ಕನ್ನಡ
ಬೆಳಗು ಸೂರ್ಯನ ತೇಜ ಪುಂಜವು
ನಮ್ಮ ಹಿರಿಮೆಯ ಕನ್ನಡ,
ಇರುಳಚಂದಿರನ ಹಾಲು ಬೆಳದಿಂಗಳು
ಚೆಲುವ ಚಿಮ್ಮುವ ಕನ್ನಡ.
ಹರಿವ ನದಿಯ ಗಾನ ಕಲರವ
ಸವಿಯ ಸೊಗಸಿನ ಕನ್ನಡ,
ನೂರು ಕೋಕಿಲ ಒಂದೇ ಸ್ವರವು
ನಾದ ವೈಭವ ಕನ್ನಡ.
ದುಡಿವ ಜನಗಳ ಬೆವರ ಹನಿಯ
ಕೂಡಿ ಕಟ್ಟಿದ ಕನ್ನಡ,
ವೀರ ಕಲಿಗಳ ಗಂಡಿನೆದೆಯ
ದೇಶಗರ್ಪಿತ ಕನ್ನಡ.
ಹಲವು ಜನುಮ ಇದ್ದರೆಮಗೆ
ಪಡೆವ ನಾಲುಗೆ ಕನ್ನಡ,
ಸೂರ್ಯ ಚಂದ್ರ ಭೂಮಿ ಆಗಸ
ಇರುವವರೆಗೂ ಕನ್ನಡ.
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

-ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ
