ಡಿ. 25ರಂದು ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಬಳ್ಳಾರಿಗೆ ಆಗಮನ, ಬೃಹತ್ ಮೆರವಣಿಗೆಗೆ ಸಿದ್ಧತೆ: ವೃತ್ತಕ್ಕೆ ಶಾಸಕ ನಾರಾ ಭರತ್ ರೆಡ್ಡಿ ಭೇಟಿ, ಪರಿಶೀಲನೆ

ಬಳ್ಳಾರಿ, ಡಿ.23: ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ಜ.3 ರಂದು ನಗರದ ವಾಲ್ಮೀಕಿ ವೃತ್ತದಲ್ಲಿ ನಡೆಯಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ ಎಂದು ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ತಿಳಿಸಿದ್ದಾರೆ.

ಡಿ. 25ರಂದು ಗುರುವಾರ ಬಳ್ಳಾರಿ ನಗರಕ್ಕೆ ಮಹರ್ಷಿ ಶ್ರೀ ವಾಲ್ಮೀಕಿಯವರ ಪುತ್ಥಳಿಯ ಆಗಮನ ಆಗುತ್ತಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಾಲ್ಮೀಕಿ ವೃತ್ತದವರೆಗೆ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ.

ವಾಲ್ಮೀಕಿ ಪುತ್ಥಳಿಯನ್ನು ಹೊತ್ತು ಬರುವ ವಾಹನವನ್ನು ಹೂಗಳಿಂದ ಸಿಂಗರಿಸಿ, ವಿವಿಧ ಕಲಾ ವಾದ್ಯ ತಂಡಗಳೊಂದಿಗೆ ಕುಂಭ-ಕಳಶ ಹೊತ್ತ 1008 ಜನ ಮಹಿಳೆಯರು ಒಳಗೊಂಡು ವಾಲ್ಮೀಕಿ ನಾಯಕರ ಸಮಾಜದ ಜನ ಹಾಗೂ ಸಾರ್ವಜನಿಕರು ಸೇರಿದಂತೆ ಅಂದಾಜು 4 ಸಾವಿರ ಜನ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮುಖಂಡರು ತಿಳಿಸಿದ್ದಾರೆ.

ಡಿ.24ರಿಂದಲೇ ವಾಲ್ಮೀಕಿ ವೃತ್ತದಲ್ಲಿ ಹೋಮ ಹವನ ನಡೆಯಲಿದ್ದು, ಡಿ.25ರಂದು ಬೆಳಿಗ್ಗೆಯಿಂದ ವಾಲ್ಮೀಕಿ ವೃತ್ತದಲ್ಲಿ ಪೂಜೆ ನಡೆಯಲಿದೆ.

ಜ.3ರಂದು ಸಂಜೆ 5 ಗಂಟೆಗೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಕೈ.ಎನ್.ರಾಜಣ್ಣ, ಬಿ.ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಜಡ್.ಜಮೀರ್ ಅಹ್ಮದ್ ಖಾನ್, ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ಹುಸೇನ್, ಶಾಸಕರಾದ ಜೆ.ಎನ್.ಗಣೇಶ್ ಸೇರಿದಂತೆ ಹಲವು ಶಾಸಕರು ಭಾಗಿಯಾಗಲಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಶಾಸಕ ನಾರಾ ಭರತ್ ರೆಡ್ಡಿ ಪರಿಶೀಲನೆ: ಜ.3ರ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ಕಾರ್ಯಕ್ರಮದ ಹಿನ್ನಲೆಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಮಂಗಳವಾರ ಬೆಳಿಗ್ಗೆ ಹಾಗೂ ಸಂಜೆ ವಾಲ್ಮೀಕಿ ವೃತ್ತಕ್ಕೆ ಭೇಟಿ ನೀಡಿ ವೃತ್ತ ನಿರ್ಮಾಣದ ಅಂತಿಮ ಹಂತದ ಸಿದ್ಧತೆಗಳಿಗೆ ಸಂಬಂಧಿಸಿ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಪರಶುರಾಮುಡು, ಹಾವಂಭಾವಿ ಲೋಕೇಶ್, ಹಗರಿ ಗೋವಿಂದ, ಯರಗುಡಿ ಸೋಮಣ್ಣ, ಮುದಿ ಮಲ್ಲಯ್ಯ, ಎಪಿಎಂಸಿ ರಾಮಣ್ಣ, ಮಾಜಿ ಮೇಯರ್ ಜಾನಕಮ್ಮ, ಪಿ.ಜಗನ್ನಾಥ, ದೇವಿನಗರ ಹೊನ್ನೂರಪ್ಪ, ಸಂಗನಕಲ್ಲು ವಿಜಯ ಕುಮಾರ್, ಭವಾನಿ ಪ್ರಸಾದ್, ಹುಲಿಯಪ್ಪ, ಗಂಗಾಧರ, ಗಂಗಪ್ಪ, ಸುಧಾಕರ್, ರಾಜು, ನರೇಂದ್ರ, ಗೋವಿಂದರಾಜು, ಲಾಲಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.