ಗ್ರಾಮೀಣ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಯೋಜನೆ ಜಾರಿಗೆ ಕೆಯುಡಬ್ಲೂಜೆ ಒತ್ತಾಯ: ಕ್ರಮದ ಭರವಸೆ ನೀಡಿದ ಸಿಎಂ

ಬೆಂಗಳೂರು, ಡಿ.23: ಪತ್ರಕರ್ತರಿಗಾಗಿ ರೂಪುಗೊಂಡಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ ತರಬೇಕು ಮತ್ತು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಠಿಣ ಷರತ್ತು ಸಡಿಲಿಸಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಆಗ್ರಹಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ತಾವು ಈ ಯೋಜನೆಗಳನ್ನು ಜಾರಿಗೆ ನೀಡಿದ್ದರೂ, ಇನ್ನೂ ಒಬ್ಬ ಪತ್ರಕರ್ತರಿಗೂ ಈ ಯೋಜನೆ ಪ್ರಯೋಜನ ಸಿಗಲಿಲ್ಲ. ಇದಕ್ಕೆ ಕಠಿಣ ಷರತ್ತುಗಳು ಕಾರಣವಾಗಿವೆ ಎನ್ನುವುದನ್ನು ವಿವರಿಸಿದ್ದಾರೆ.
ಇದಕ್ಕೆ ತಕ್ಷಣವೇ ಸ್ಪಂಧಿಸಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮಾನ್ಯತೆ ಪಡೆದಿರುವ ಪತ್ರಕರ್ತರಿಗೆ ಮಾತ್ರವೇ ಸೀಮಿತ ಮಾಡಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಮಾನ್ಯತೆ ಪಡೆದಿರುವ ಪತ್ರಿಕೆಯಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.


ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಮೊದಲ ಹಂತದಲ್ಲಿ 5,500 ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ನೀಡಬೇಕಾಗಿತ್ತು. ಆದರೆ ಈ ಯೋಜನೆಯೂ ಸರಿಯಾಗಿ ಜಾರಿಯಾಗದ ಕಾರಣ ಗ್ರಾಮೀಣ ಪತ್ರಕರ್ತರನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದನ್ನು ಮನವಿಯಲ್ಲಿ ವಿವರಿಸಲಾಗಿದೆ.

ಕಠಿಣ ಷರತ್ತುಗಳನ್ನು ಸಡಿಲಿಸುವಂತೆ ಹಲವು ಬಾರಿ ಪತ್ರ ಬರೆದು ಸರ್ಕಾರಕ್ಕೆ ವಿನಂತಿಸಲಾಗಿದೆ. ಆದರೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎನ್ನುವ ಅಂಶವನ್ನು ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಪಡೆಯಲು ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಅರ್ಹರಾಗಿರುತ್ತಾರೆ. ಗ್ರಾಮೀಣ ಭಾಗದ ಪತ್ರಕರ್ತರಿಗೆ ಪೂರ್ಣಾವಧಿ ನೇಮಕಾತಿ ಇರುವುದಿಲ್ಲ. ಆದುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪತ್ರಿಕಾ ಸಂಸ್ಥೆಗಳು/ಸಂಪಾದಕರು ನೀಡುವ ದೃಢೀಕರಣ ಆಧರಿಸಿ ಮತ್ತು ಬೈಲೈನ್‌ನ್ನು ಮಾನದಂಡವಾಗಿಸಿಕೊಂಡು ಬಸ್‌ಪಾಸ್ ನೀಡಬೇಕೆಂದು ಮನವಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆಯ ಕಾರ್ಯದರ್ಶಿ ಕಾವೇರಿ, ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ ನಿಂಬಾಳ್ಕರ್ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಮನವಿಯನ್ನು ನೀಡಲಾಗಿದೆ