ಅನುದಿನ ಕವನ-೧೮೧೮, ಕವಯತ್ರಿ:ಗಾಯತ್ರಿ ಬಿ, ತೋರಣಗಲ್ಲು, ಕವನದ ಶೀರ್ಷಿಕೆ: ನಗುಮುಖದ ನೋವಿನ ಗೆರೆ

ನಗುಮುಖದ ನೋವಿನ ಗೆರೆ

ನಗು
ಮುಖದ ನೋವಿನ ಗೆರೆಗಳಳಿಸುವ
ಮಾಂಸದ ತಡಿಕೆಯಾದೆ
ದುಃಖವೆಂಬ ವಿಷಕೆ ಸಿಹಿ ಗಾಳಿಯಾಗಿ
ಮನದಾಳದ ಮಾತಿಗೆ ಸೇತುವೆಯಾದೆ.

ಕಾಡ್ಗಿಚ್ಚಿನ ಹೊಟ್ಟೆಕಿಚ್ಚಿಗೆ
ಮುಂಗಾರು ಮಳೆಯಾಗಿ
ಇಬ್ಬನಿಯಂತೆ
ಕರಗಿಸಿದೆ ಮನಸಿನ ಭಾರವ
ಬಾಡಿದ ಮೊಗದ ಕಳೆಗೆ ನೀನಾದೆ
ವನೌಷಧಿಯಂತೆ.

ಮೌನದ ಸನ್ನೆಗೆ ಕರೆದೊಯ್ಯುವ
ಚುಂಬನ ನೀನಾಗಿ
ಕತ್ತಲೆಗವಿದಿರುವ ಮೊಗಕೆ ಭಾನಾದೆ
ಮಾತಿಲ್ಲದೆ ಬಂಧ ಬೆಸೆಯುವ
ಕಲ್ಲೆದೆಯ ಕರಗಿಸುವ ಉಳಿಯಾದೆ.

ನಂಜು ನಿವಾರಕ, ಮೊಗದ ಮಾಲೀಕ
ತುಟಿಯಂಚಲಿ ನೆಲೆಸಿ
ಮಲ್ಲಿಗೆಯಂತೆ ಮನವರಳಿಸಿ
ಸಂಪಿಗೆಯ ಸುವಾಸನೆಯಾದೆ .

-ಗಾಯತ್ರಿ ಬಿ, ತೋರಣಗಲ್ಲು
—–