ನೀನಲ್ಲಿ ಮುಗಿಲ ದಿಟ್ಟಿಸಿದರೆ
ನನಗಿಲ್ಲಿ ಮೋಡ ಬಸಿರಾದ ಕನಸು.
ನೀನು ಸ್ಮೃತಿಯಲ್ಲೊಮ್ಮೆ ಹಾದು ಹೋದರೆ
ನನಗಿಲ್ಲಿ ಪಾರಿಜಾತದೊಂದಿಗೆ ಮುನಿಸು.
ನೀನಲ್ಲಿ ಉಸಿರ ಬಿಕ್ಕಳಿಸಿದರೆ
ನನಗಿಲ್ಲಿ ದಟ್ಟ ನೀರಡಿಕೆ.
ನೀನಲ್ಲಿ ನಿದಿರೆಗೆರೆದರೆ ನನಗಿಲ್ಲಿ
ಕಣ್ಣ ತುಂಬಾ ಉಸಿರಿನಂತ ವಾಡಿಕೆ.
ನಿನ್ನ ಕಣ್ಣಂಚಲಿ ಸಡಗರದ
ಸೂರ್ಯ ನಕ್ಕರೆ.
ನನ್ನ ಒಕ್ಕುಳ ತಾರೆಗಳಿಗೆಲ್ಲ
ಹಬ್ಬದ ಪರಿಷೆ.
ನಿನ್ನ ಆಸೆಗಳು
ಮೌನಕ್ಕೆ ಇಳಿದರೆ
ನನ್ನ ನಂಬಿಕೆ ಇಲ್ಲಿ
ಗಸ್ತು ತಿರುಗುತ್ತದೆ.
ನೀನು ಹೂದೋಟದಲ್ಲಿ
ಪಾದವಿರಿಸಿದರೆ
ನನ್ನ ಗುಬ್ಬಿ
ಗೂಡಲಿ ಚಿಲಿಪಿಲಿ.
ನೀನು ಮಾಮರದ
ಚಿಗುರು ಚಿನ್ಹೆಯಾದರೆ
ನನ್ನ ತಾರುಣ್ಯೋದಯಕೆ
ಜೀವ ಹಿಂಡಿದ ಗುರುತು.

✍️ಮಂಜುಳಾ ಭಾರ್ಗವಿ, ಬೆಂಗಳೂರು
