ಒಂದು ನಿರುಪಯುಕ್ತ ಕನಸು
ಕಾಣೆಯಾದವರು
ಸಿಕ್ಕು ಬಿಡುತ್ತಾರೆ
ಕನಸಿನೊಳಗೆ
ಹೇಗೆ ಹಿಡಿದು ಕೊಡುವುದು
ಕಳೆದುಕೊಂಡವರಿಗೆ?
ಅದೇ ಗೋದಿ ಬಣ್ಣ
ಹೋಳು ಮಾರೆ
ಒಣಗಿದ ತುಟಿ
ಗಾಯಗೊಂಡ ಹೃದಯ
ತೇಲುಗಣ್ಣು
ಕೆದರಿದ ಕಪ್ಪು ಬಿಳಿಪು ಕೂದಲು
ಎತ್ತರ?
ಎತ್ತರವ ಅಳೆಯುವುದು
ಕಣ್ಣಿನ ತಾಕತ್ತಲ್ಲ ಬಿಡಿ
ಎಷ್ಟಂತ ಅಳೆಯುವುದು
ಸತತ ಬೆಳೆಯುವರನ್ನು
ಅದೂ ಈ ಕನಸಿನೊಳಗೆ
ಒಂದು ಅಳತೆಪಟ್ಟಿಯೂ ಸಿಗುತ್ತಿಲ್ಲ
ದೂರದಲ್ಲೆಲ್ಲೊ ಕಾಣುತ್ತಿದೆ
ಮಿರಿ ಮಿರಿ ಮಿಂಚುತ್ತಿದೆ
ಓಡಿ ಹೋಗಿ ಹಿಡಿದೊಡೆ
ಕಾಳಿಂಗ ಸರ್ಪ!!!
ಬುಸುಗುಡುವ ವಿರಹ!
ಅದೆಷ್ಟು ಘೋರ ಕಾಣೆಯಾದವರ
ರೂಪಾಂತರ
ಹೇಗೆ ಹಿಡಿದು ಕೊಡುವುದು
ನೀವೆ ಹೇಳಿ
ಅಳತೆಗೆ ಸಿಗದ
ಕಲ್ಪನೆಗೂ ಮೀರಿದ
ಅಂಗೈಯೊಳಗೆ ಕರಗುವ
ಬೆಣ್ಣೆ ಗುಳ್ಳೆಯಂಥ ಕನಸಿನೊಳಗೆ
ಕಾಣೆಯಾದವರು ಉಳಿದುಬಿಟ್ಟರೆ
ಕಲೆಯಾಗಿ ಅಚ್ಚಬಿಳಿಯ ಹಾಳೆಯ ಮೇಲೆ

-ಭುವನಾ ಹಿರೇಮಠ, ಕಿತ್ತೂರು
ಚಿತ್ರ ಕೃಪೆ: ಅಸದ್, ಹಿರಿಯೂರು
