ಅನುದಿನ ಕವನ-೧೮೪೧, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಸಂಕ್ರಾಂತಿಗೊಂದು ಸಾನೆಟ್

ಸಂಕ್ರಾಂತಿಗೊಂದು ಸಾನೆಟ್

ರಾಜನಾಜ್ಞೆಗೆ ನವಿಲು ನಾಟ್ಯಗೈಯಲುಂಟೆ?
ಕಾನೂನು ಕಟ್ಟಳೆಗೆ ಕೋಗಿಲೆ ಕೂಗಲುಂಟೆ!
ಬೆದರಿಕೆಗೆ ಹೆದರಿ ರವಿ ಪಥ ಬದಲಿಸಲುಂಟೆ?
ಕೋಟಿ ನೋಟಲಿ ಚಂದಿರನ ತೂಗಲುಂಟೆ!

ಜಾಲತಾಣದಿ ಗೆಣಸು ಗೆಜ್ಜರಿ ಬೆಳೆಯಲುಂಟೆ?
ಚಿನ್ನದ ಬಳ್ಳದಲಿ ಅನ್ನವನು ಅಳೆಯಲುಂಟೆ!
ಪಬ್ಬು ಬಾರ್ ಗಳಲಿ ಕಬ್ಬು ಬಿಕರಿಯಾಗಲುಂಟೆ?
ಐಟಿ ಬಿಟಿಯಲಿ ಎತ್ತು ಬಂಡಿ ಓಡಲುಂಟೆ!

ಮುಷ್ಕರವು ಮಳೆಯನು ಇಳೆಗೆ ತರಿಸಲುಂಟೆ?
ಚಳುವಳಿಗಳು ಚಳಿಯ ತಡೆದು ನಿಲಿಸಲುಂಟೆ!
ಬಂಧಿಖಾನೆಯಲಿ ಬಿಸಿಲನು ಬಂಧಿಸಲುಂಟೆ?
ತಿರುಗವ ಭೂಮಿಗೆ ತೈಲವನು ತುಂಬಲುಂಟೆ!

ಪ್ರಕೃತಿಯನು ಪ್ರೀತಿಸೋಣ ಅದುವೇ ಸಂಕ್ರಾಂತಿ💥
ಸಂಸ್ಕೃತಿಯ ಗೌರವಿಸೋಣ ಬಾಳಿಗದೇ ಶಾಂತಿ💐


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ