ಇಳಿ ಸಂಜೆ, ನಡುರಾತ್ರಿ ,
ಬೆಳಗು ಜಾವದಲಿ ಕಣ್ಣು ಮಬ್ಬಾಗಿಸುವ
ಅದೆಷ್ಟೋ ದೂರ ದಟ್ಟ ಹಬ್ಬಿ
ಆವರಿಸಿ ಮಂಜು
ಮೈ ಚರ್ಮ ಮೂಳೆ ಮಾಂಸ
ಗಳನ್ನೆಲ್ಲಾ ಮಂಜುಗಡ್ಡೆಯಾಗಿಸುವ
ಕೊರೆವ ಥಂಡಿಗಾಳಿಗೆ
ಮೈಯೊಡ್ಡದಂತೆ ಮಗಳನ್ನು
ಒಳಕರೆದು ಬೆಚ್ಚಗಿರಿಸುತ್ತೇನೆ
ಉಲ್ಲನ್ ಸ್ವೆಟರ್ ತೊಡಿಸಿ
ಮಫ್ಲರ್ ಕಿವಿ ಕೊರಳಿಗೆ ಸುತ್ತಿ
ನನ್ನದೆಗೆ ಒತ್ತಿಕೊಂಡೇ
ಮಲಗಿಸುವಾಗ ಹೊದ್ದ ರಗ್ಗಿನೊಳಗೆ
ತೂರಿಕೊಂಡು
ಮುದುಡಿದ ಮನೆಯ ಬೆಕ್ಕುಗಳ
ತಲೆ ಸವರಿ ನಿದ್ದೆಗೆ ಜಾರುವ ಹೊತ್ತಲ್ಲಿ
ನೆನಪಾಗುತ್ತದೆ ….
ಮನೆಯ ತಿರುವಿನ ಮೂಲೆಯಲ್ಲಿ
ಕುಂಯ್ ಗುಡುತ್ತಿರುವ
ತಿಂಗಳ ಹಿಂದಷ್ಟೇ ಹುಟ್ಟಿದ್ದ
ನಾಯಿಮರಿಗಳು ,
ಹಾದಿ ಬದಿಯಲ್ಲಿ
ಒಣಗಿದ ತರಗೆಲೆಗಳನ್ನು ಒಟ್ಟಾಗಿಸಿ
ಬೆಂಕಿ ತಾಗಿಸಿ ಬೆಚ್ಚಗಾಗುತ್ತಿರುವ
ಬೀದಿಜೀವಗಳು,
ಫುಟ್ ಪಾತ್ ಮೇಲೆ ಕಟ್ಟಿಕೊಂಡ
ಟೆಂಟಿನೊಳಗೆ ತಾಯ ಸೆರಗಿನಲ್ಲಿ
ಅರೆಹೊಟ್ಟೆಯಲ್ಲಿ ಹರಕಲು ಬಟ್ಟೆಯಲ್ಲಿ
ಮಲಗಿ ನಡುಗುವ ಕಂದಮ್ಮಗಳು,
ಟ್ರಾಫಿಕ್ ಸಿಗ್ನಲಿನಲ್ಲಿ ಹೆಗಲಿಂದ
ಬೆನ್ನಿಗೆ ತಾಗಿಸಿಕೊಂಡ
ಬಟ್ಟೆಯ ಜೋಳಿಗೆಯೊಳಗಿಂದ
ಹಸಿವೆಗೋ ನಿದ್ದೆಗೋ
ಕೊರೆವ ಚಳಿಯಲ್ಲಿ ಕೈಕಾಲು
ಹೊರಹಾಕಿ ತೂಕಡಿಸುವ ಹಸುಳೆಗಳು..
ಊರು ಕೇರಿ ದಾಟಿ ದೂರದೂರಿನ
ಹಾದಿಬೀದಿಗಳ ಜೀವಗಳೆಲ್ಲಾ
ಚಳಿಗೆ ನಡುಗಿ
ಮರಗಟ್ಟಿಹೋಗುವ ಚಿತ್ರ
ಕಣ್ಮುಂದೆ ಹಾದು ಹೋದಂತಾಗಿ
ಒಮ್ಮೆಗೆ ಬೆವರಿ ಕಂಗಾಲಾಗುತ್ತಾ
ಸಣ್ಣಗೆ ದುಗುಡ ಹೆಪ್ಪುಗಟ್ಟುವಾಗ
ಕಣ್ಣು ತೇವಗೊಂಡು
ಹೃದಯ ಕಳವಳಿಸುವ ಕ್ಷಣದಲ್ಲೇ
ರಗ್ಗಿನ ಹೊದಿಕೆ ಸರಿಸಿ ಮೇಲೆದ್ದು
ತೆರೆದ ಕಿಟಕಿಯಲ್ಲಿಣುಕಿ
ರಾಚುವ ಥಂಡಿಗಾಳಿಗೆ ಮುಖವೊಡ್ಡಿ
ಗಾಢ ಕತ್ತಲಿನೊಳಗೆ ಕೈಮುಗಿದು
“ಘೋರ ಕ್ರೂರ ಚಳಿಯೇ
ಆ ಜೀವಗಳನ್ನೆಲ್ಲಾ ಈ ಕೂಡಲೇ
ಕರುಣೆ ತೋರಿ ಬೆಚ್ಚಗಿರಿಸು ”
ಮೊರೆಯಿಡುತ್ತೇನೆ ಆರ್ತಳಾಗಿ
ಮಂಡಿಯೂರಿ.

-ಡಾ. ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು
—–
