
ಬಳ್ಳಾರಿ, ಜ.4: ಕೋಗಿಲು ಮತ್ತು ಬಳ್ಳಾರಿ ಘರ್ಷಣೆ ಪ್ರಕರಣ ವಿರುದ್ಧ ಬೆಂಗಳೂರಿನಲ್ಲಿ ಸೋಮವಾರ(ಜ.5)ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಅವರು ಭಾನುವಾರ ನಗರದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದರು.
ಬಳ್ಳಾರಿ ಘರ್ಷಣೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಶಾಸಕ ಜನಾರ್ದನ ರೆಡ್ಡಿ ಅವರನ್ನು ಟಾರ್ಗೆಟ್ ಮಾಡಲಾಗಿತ್ತು ಎಂದು ಆರೋಪಿಸಿದರು.
ಬಳ್ಳಾರಿ ಪ್ರಕರಣದ ಬಗ್ಗೆ ಸೂಕ್ತ ಕ್ರಮಜರುಗಿಸಲು ರಾಜ್ಯ ಸರಕಾರಕ್ಕೆ ಸೂಚಿಸಬೇಕೆಂದು ಒತ್ತಾಯಿಸಿ
ರಾಜ್ಯಪಾಲರಿಗೂ ಮನವಿ ಪತ್ರ ನೀಡುತ್ತವೆ ಎಂದು ಹೇಳಿದರು.
ಜ.6 ರಂದು ನವದೆಹಲಿಗೆ ಹೋಗುತ್ತಿದ್ದು ಬಳ್ಳಾರಿ ಗಲಾಟೆ ಪ್ರಕರಣವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನುವ್ಯವಸ್ಥೆ ಸಂಪೂರ್ಣವಾದ ಹಾಳಾಗಿದೆ. ಡ್ರಗ್ ಮಾಫಿಯಾ ಸಕ್ರೀಯವಾಗಿದೆ ಎಂದು ದೂರಿದರು.
ರಾಜ್ಯ ಪೊಲೀಸರ ಮೇಲೆ ನಮಗೆ ನಂಬಿಕೆಯಿಲ್ಲ ಹೀಗಾಗಿ ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ವಹಿಸಿ ಇಲ್ಲವೇ ಹೈಕೋರ್ಟಿನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಿ ಎಂದು ಅಶೋಕ್ ಒತ್ತಾಯಿಸಿದರು.
ಗುರುವಾರ
ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರದಿದ್ದರೆ ಇನ್ನೂ ಹೆಚ್ಚಿನ ಸಾವು ನೋವು ಸಂಭವಿಸುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ಗುಂಪಿನ ದಾಳಿಗೆ ಒಳಗಾದ ಶಾಸಕ ಜನಾರ್ದನ ರೆಡ್ಡಿಅವರಿಗೆ ಕರೆ ಮಾಡಿವಿಚಾರಿಸುವ ಬದಲು ರಾಜ್ಯ ಗೃಹ ಸಚಿವರು ಅಪರಾಧ ಮಾಡಲು ಬಂದ ಶಾಸಕರ ಜತೆ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬಳ್ಳಾರಿ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ಶಾಪ ವಾಗುತ್ತದೆ ಮಾತ್ರವಲ್ಲ ತಿರುಗುಬಾಣ ವಾಗುತ್ತದೆ ಎಂದು ಟೀಕಿಸಿದರು.
ನಾವು ರಾಮನ ಭಕ್ತರು, ವಿಧಾನ ಸೌಧದ ಬಳಿ ಶ್ರೀ ವಾಲ್ಮೀಕಿ ಪುತ್ಥಳಿಯನ್ನು ಬಿಜೆಪಿ ಸರಕಾರವಿದ್ದಾಗ ಪ್ರತಿಷ್ಠಾಪಿಸಿದೆ. ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಕೇಸರಿ ಮತ್ತು ರಾಮನನ್ನು ಕಂಡರೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸುತ್ತದೆ ಎಂದು ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕ. ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜಿ. ಜನಾರ್ದನ ರೆಡ್ಡಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಮಾಜಿ ಶಾಸಕರಾದ ಎಂಎಸ್ ಸೋಮಲಿಂಗಪ್ಪ, ಜಿ.ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.
