ಇದಕು ಮಿಗಿಲಾಗಿ ಏನು ಬರೆಯಲಿ ಗೆಳತಿ…..
ನಾನು ನಿನ್ನಿಚ್ಚೆಯಂತೆ ಕವಿತೆ ಬರೆಯುತ್ತೇನೆ ನಿಜ ಗೆಳತಿ
ಆದರೆ ಇದಕ್ಕೂ ಮಿಗಿಲಾಗಿ ನನ್ನಿಂದ ಸಾಧ್ಯವಿಲ್ಲ
ಬೇಕಾದರೆ ಓದುಗರನ್ನೆ ಕೇಳಿಬಿಡೋಣ
ಮೋಹಕತೆಯ ಕುರಿತು ಬರೆ ಎಂದಳು
ನಾನು ಕಿವಿಗಳಲ್ಲಿ ಪಿಸುಮಾತು ನುಡಿದೆ
ಅವಳು ನಾಚಿ ಮೊಗ್ಗದಳು
ತಂಗಾಳಿಯ ಕುರಿತು ಎಂದಳು
ನಾನು ಉಸಿರಿಗೆ ಉಸಿರ ಮಿಲಾಯಿಸಿದೆ
ಅವಳು ಸಣ್ಣಗೆ ಬೇಯಲು ಶುರುವದಳು
ನದಿಯ ಕುರಿತಾಗಿ ಎಂದಳು
ನಾನು ಕೊರಳ ಮರೆಮಾಚಿದ್ದ
ಹೆರಳ ಸರಿ ಪಡಿಸಿದೆ
ಅವಳು ಭೋರ್ಗರೆದು ಕಡಲಾಗಿ ನಿಂತಳು
ಸೊಗಸಾದ ಸಂಜೆಯ ಬಗ್ಗೆ ಎಂದಳು
ನಾನು ಇನ್ನು ಸಮೀಪ ಸರಿದು
ಹಿತವಾದ ಸ್ಪರ್ಶ ಸುಖವ ಸವಿಸಿದೆ
ಅವಳು ಮೋಡವಾಗಿ ಹೆಪ್ಪುಗಟ್ಟಿದಳು
ಇಳೆಯ ಬಗ್ಗೆ ಬರೆ ಎಂದಳು
ನಾನು ಕೆಂದುತಿಗಳ ಬಯಲಿಗೆ
ಮೆತ್ತಗೆ ಮುತ್ತಿಟ್ಟೆ
ಅವಳು ಜಿಟಿ ಜಿಟಿ ಮಳೆಯಾಗಿ ಸುರಿದಳು
ಇನ್ನು ಸಾಕು ನನ್ನ ಕುರಿತಾಗಿ ಕವಿತೆ ಹೇಳು ಅಂದಳು
ನಾನು ಎದೆಗೆ ಅಪ್ಪಿಕೊಂಡು
ಮಿಡಿವ ಹೃದಯದ ಸದ್ದು ಕೇಳಿಸಿದೆ
ಅವಳು ಮೌನವದಳು
ನಾನು ಕವಿತೆ ಹೇಳಿದೆ
ಈಗ ನೀವೆ ಹೇಳಿ
ಇದಕು ಮಿಗಿಲಾಗಿ ಏನು ಬರೆಯಲಿ
ಏನು ಹೇಳಲೆಂದು …

-ತರುಣ್ ಎಂ ಆಂತರ್ಯ✍️, ಟಿ.ನಾಗೇನಹಳ್ಳಿ, ಚಿತ್ರದುರ್ಗ
