ಅನುದಿನ ಕವನ-೧೯೨೪, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್

ಬಣ್ಣ ಹಚ್ಚಿಕೊಳ್ಳದೆ ನಟಿಸುವವರ ಕಾಲವಿದು ಎಚ್ಚರವಿರಲಿ
ಸಂತೈಸಿದಂತೆ ಕಂಡರೂ ಒಳಗೆ ಖುಷಿ ಪಡುವವರ ಲೋಕವಿದು ಎಚ್ಚರವಿರಲಿ

ಇಟ್ಟುಕೊಂಡ ಎಲ್ಲ ಭ್ರಮೆಗಳೂ ಕಳಚಿ ಬೀಳುತ್ತವೆ ಒಮ್ಮೆ
ಅಪ್ಪಿಕೊಂಡಂತೆ ಮಾಡಿ ಬೆನ್ನಿಗೆ ಚೂರಿ ಹಾಕುವವರ ಜಗವಿದು ಎಚ್ಚರವಿರಲಿ

ಅಷ್ಟು ಸುಲಭಕ್ಕೆ ಯಾರಿಗೂ ಮನಸಿತ್ತು ಮೋಸ ಹೋಗಬಾರದು
ಜೊತೆ ಇದ್ದಂತೆ ನಟಿಸಿ ಬೇರೊಬ್ಬರ ತೋಳು ಬಳಸುವ ಪ್ರಪಂಚವಿದು ಎಚ್ಚರವಿರಲಿ

ಕಟುಕ ಕಾಸಿನ ಮುಂದೆ ಮನುಷ್ಯತ್ವ ಮಂಡಿಯೂರಿ ಕಣ್ಣೀರಿಡುತ್ತಿದೆ
ಪ್ರೀತಿಗೆ ಜೀವ ಕೊಡುತ್ತೇನೆಂದವರು ಜೇಬು ತಡಕಾಡುವ ಸಂದರ್ಭವಿದು ಎಚ್ಚರವಿರಲಿ

ಎಷ್ಟು ನಟಿಸಿದರೂ ಒಮ್ಮೆ ‘ನಾಗೇಶಿ’ಯ ಮುಂದೆ ಬಯಲಾಗಲೇಬೇಕು ಬಣ್ಣ
ಬೆಳಕೆಂದು‌ ಭಾವಿಸಿದ್ದು ಬದುಕಿಗೆ ಕತ್ತಲಾಗುವ ಆಶ್ಚರ್ಯವಿದು ಎಚ್ಚರವಿರಲಿ

-ನಾಗೇಶ್ ಜೆ. ನಾಯಕ, ಸವದತ್ತಿ