ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಭಾಜನ: ಇಂದು(ಏ.12) ಬಳ್ಳಾರಿಯಲ್ಲಿ ಪ್ರಶಸ್ತಿ ಪ್ರದಾನ

ಬಳ್ಳಾರಿ, ಏ.12: ಅಂತರಾಷ್ಟ್ರೀಯ ಪ್ರಸಿದ್ಧ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಅಂತರಾಷ್ಟ್ರೀಯ ಜಾನಪದ ಗಾಯಕ, ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರು ಆಯ್ಕೆಯಾಗಿದ್ದಾರೆ.
ನಗರದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಕಳೆದ ವರ್ಷದಿಂದ ರಾಷ್ಟ್ರೀಯ ಪ್ರಶಸ್ತಿ ‌ನೀಡುತ್ತಿದ್ದು, ಏ.12 ರಂದು ಭಾನುವಾರ ಸಂಜೆ 5 ಗಂಟೆಗೆ ಸ್ಥಳೀಯ ಡಾ.‌ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯ ಈ. ತುಕಾರಾಂ ಅವರು ಪ್ರಶಸ್ತಿ ಪ್ರದಾನ‌ ಮಾಡುವರು ಎಂದು ಟ್ರಸ್ಟ್ ಹಾಗೂ ಕಾರ್ಯಕ್ರಮ ಸಂಚಾಲಕ ಬೆಳಗಲ್ಲು ಹನುಮಂತ ಅವರು ತಿಳಿಸಿದರು.
ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ‌ಅಧ್ಯಕ್ಷ ಡಾ.‌ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಉದ್ಘಾಟಿಸುವರು. ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ. ಗಾದೆಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.‌ನಾಗೇಂದ್ರ ಪ್ರಸಾದ್, ಜಿಲ್ಲಾ ಎಸ್ಪಿ ಡಾ.‌ಸುಮನ್ ಡಿ.‌ಪನ್ನೇಕರ್, ಮೈಸೂರಿನ ರಂಗಕರ್ಮಿ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರದ ಮಾಲೀಕ ಬಿ.‌ಎಂ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ‌ನಿರ್ದೇಶಕ ಬಿ.‌ನಾಗರಾಜ, ಕರ್ನಾಟಕ ಜಾನಪದ ಅಕಾಡೆಮಿ ‌ ಸದಸ್ಯ ಸಿ.‌ಎನ್ ಮಂಜೇಶ್ ಚನ್ನಾಪುರ, ನಗರದ ಶ್ರೀ ಕೊಟ್ಟೂರು ಸ್ವಾಮಿ ಬಿ.ಇಡಿ‌‌ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಹಿರೇಮಠ ಮತ್ತು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಡಾ. ಬಾನಂದೂರು ಕೆಂಪಯ್ಯ

ಕಾರ್ಯಕ್ರಮಕ್ಕೆ ಮುನ್ನ ಮೋತಿ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಜಾನಪದ ಕಲಾ ತಂಡಗಳ ಆಕರ್ಷಕ ಮೆರವಣಿಗೆಯಲ್ಲಿ ಅತಿಥಿ ಗಣ್ಯರು, ನಾಡೋಜ ಬೆಳಗಲ್ಲು ವೀರಣ್ಣ ಅವರ ಒಡನಾಡಿಗಳು, ಹಿತೈಷಿ, ಅಭಿಮಾನಿಗಳು ರಂಗಮಂದಿರ ತಲುಪುವರು.
ಸಾಂಸ್ಕೃತಿಕ ಅಂಕಣ: ನೆರೆಯ ಆಂದ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಧರ್ಮಾವರಂದ ನಿಮ್ಮಲಕುಂಟ ಶ್ರೀ ವನಾರ್ಚ ರಾಮಕೃಷ್ಣ ತೊಗಲುಗೊಂಬೆಯಾಟ ಕಲಾ ತಂಡದಿಂದ ಸುಂದರಕಾಂಡ (ಸೀತಾಪಹರಣ) ತೊಗಲು ಗೊಂಬೆಯಾಟ ಪ್ರದರ್ಶನ ಪ್ರಶಸ್ತಿ ಪ್ರದಾನದ ಬಳಿಕ ಜರುಗಲಿದೆ.

ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ

ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಡಾ. ಬಾನಂದೂರು ಕೆಂಪಯ್ಯ ಅವರ ಪರಿಚಯ: ಅಂತಾರಾಷ್ಟ್ರೀಯ ಜಾನಪದ ಗಾಯಕ, ಸಾಹಿತಿ, ಸಂಗೀತಗಾರ, ಸಂಶೋಧಕ, ಹಾಡುವ ಹಕ್ಕಿ
ಡಾ. ಬಾನಂದೂರು ಕೆಂಪಯ್ಯ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಾನಂದೂರಿನಲ್ಲಿ 1951 ಜೂನ್14ರಂದು ಜಾನಪದ‌ ಕುಟುಂಬದಲ್ಲಿ ಜನಿಸಿದರು. ಇವರ ತಾಯಿ ಹುಚ್ಚಮ್ಮ ಜನಪದ ಗಾಯಕಿ, ತಂದೆ ಚರ್ಮವಾದ್ಯ ನುಡಿಸುವುದರಲ್ಲಿ ಪರಿಣಿತ ಹೊಂದಿದ್ದ ವೆಂಕಟಯ್ಯ ಅವರು. ಸಾಂಸ್ಕೃತಿಕ ಶ್ರೀಮಂತಿಕೆಯ ದಂಪತಿಗಳ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಲ್ಲಿ ಕೆಂಪಯ್ಯನವರೆ ಕಿರಿಯರು. ಇವರ ಅಣ್ಣ ಆರು ನಗಾರಿ ಬಾರಿಸುವ ಪರಿಣತಿ ಪಡೆದು ನಗಾರಿ ಸಿದ್ದಯ್ಯನೆಂದೇ ಪ್ರಸಿದ್ಧಿ ಹೊಂದಿದ‌ ಪ್ರತಿಭಾವಂತರು.
ಡಾ. ಬಾನಂದೂರು ಅವರ ಪ್ರಾಥಮಿಕ ಶಿಕ್ಷಣ ಬಾನಂದೂರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ(ಆನರ್ಸ್) ಪದವಿ,
೧೯೮೪ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಸ್ನಾತಕೋತ್ತರ(ಎಂ.ಎ) ಪದವಿ ಪಡೆದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕರ್ನಾಟಕ ದಲಿತ ಜಾನಪದ ಸಂಗೀತದಲ್ಲಿ ಡಿ.ಲಿಟ್. ಪದವಿ ಪಡೆದಿದ್ದಾರೆ.
ಡಾ. ಬಾನಂದೂರು ಕೆಂಪಯ್ಯನವರು ಆರಂಭದಲ್ಲಿ ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿ, ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೮೦ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇರಿದ ಬಳಿಕ ಹಿಂತಿರುಗಿ ನೋಡಲಿಲ್ಲ . ಬೆಂಗಳೂರು,ಧಾರವಾಡ, ಗುಲ್ಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಉಪ ನಿರ್ದೇಶಕರಾಗಿ, ಕಾರ್ಯಕಾರಿ ನಿರ್ಮಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದರು.
ಸಾಹಿತ್ಯ ಸೇವೆ: ಡಾ. ಕೆಂಪಯ್ಯ ಅವರು ಬಯಲು ಸೀಮೆಯ ಜಾನಪದ ಕಥೆಗಳ ಸಂಕಲನ ಹೊರ ತಂದಿದ್ದಾರೆ. ‘ಚೆಂದುಳ್ಳಿ ಪದವ ಕಲಸವ್ವ’ ಹಾಗು ‘ಮೊಗ್ಗಾಗಿ ಬಾರೊ ತುರುಬಿಗೆ’ ಎಂಬ ಹೆಸರಿನ ಜನಪದ ಗೀತೆಗಳ ಸಂಗ್ರಹ, . ‘ನನ್ನ ಈ ನೆಲದಲ್ಲಿ’ ಎನ್ನುವ ಕವನ ಸಂಕಲನ ಪ್ರಕಟಿಸಿದ್ದಾರೆ. ಕನ್ನಡ ನಾಡಿನ ನೂರಕ್ಕೂ ಹೆಚ್ಚು ಜನಪದ ಕಲಾವಿದರನ್ನು ಹಾಗು ಅವರ ಜನಪದ ಸಾಹಿತ್ಯವನ್ನು ಪತ್ರಿಕೆಗಳ ಮೂಲಕ ನಾಡಿಗೆ ಪರಿಚಯಿಸಿರುವುದು‌ವಿಶೇಷ.
ಡಾ. ಬಾನಂದೂರು ಅವರು, ಹೈಸ್ಕೂಲಿನಲ್ಲಿದ್ದಾಗಲೆ ತಮ್ಮ ಜನಪದ ಹಾಡುಗಾರಿಕೆಗಾಗಿ ಬಹುಮಾನ ಪಡೆದು ‘ಬೆಳೆಯುವ ಸಿರಿ ಮೊಳಕೆಯಲಿ’ ಎಂಬಂತೆ ಗಮನ ಸೆಳೆದರು.
ಎರಡು ಬಾರಿ ಅಮೆರಿಕಾ, ಒಂದು ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡು ತಮ್ಮ ಜಾನಪದ ಗಾಯನದ ಮೂಲಕ ನಾಡಿಗೆ, ದೇಶಕ್ಕೆ ಕೀರ್ತಿ ತಂದ ಡಾ. ಕೆಂಪಯ್ಯ ಅವರು ದೇಶದ ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ ಮಾತ್ರವಲ್ಲ‌ ಅನೇಕ ಸಣ್ಣಾಟ, ದೊಡ್ಡಾಟ, ಗೊಂಬೆಯಾಟಗಳಿಗೆ ಸಂಗೀತ ಒದಗಿಸಿದ್ದಾರೆ. ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಶ್ರೀಮತಿ ಮಂಜುಳಾ ಗುರುರಾಜ್ ಹಾಗು ಕಸ್ತೂರಿ ಶಂಕರ್ ಜೊತೆಗೆ ಹಾಡಿದ್ದಾರೆ. ಈ ಧ್ವನಿಸುರಳಿಗಳಲ್ಲಿ ‘ಬಣ್ಣದ ಬಳೆಗಾರ’ ವಿಶೇಷವಾಗಿ ಜನಪ್ರಿಯವಾಗಿದೆ. ಕೆಂಪಯ್ಯನವರು ಜನಪ್ರಿಯಗೊಳಿಸಿದ ಮತ್ತೊಂದು ಜನಪದ ಗೀತೆಯೆಂದರೆ ‘ಬಿದಿರು ನಾನಾರಿಗಲ್ಲದವಳು’.
ಸಿನಿಮಾ‌ ನಂಟು: ಡಾ. ಕೆಂಪಯ್ಯನವರು ಗುರುರಾಜ ಕಾಟೆ ನಿರ್ದೇಶನದ ‘ಬಂಗಾರದ ಗೂಳಿ’ ಚಲನಚಿತ್ರಕ್ಕೆ ಗುಣಸಿಂಗ ಅವರ ಜತೆ ಸಂಗೀತ ನಿರ್ದೇಶಿಸಿದ್ದಾರೆ. ಅಲ್ಲದೆ “ಜಿಪ್ಸಿಗಳು” ಎನ್ನುವ ರಶಿಯನ್ ನಾಟಕಕ್ಕೂ ಸಂಗೀತ ನೀಡಿದ ಹೆಗ್ಗಳಿಕೆ ಇವರದು.
ಅಕಾಡೆಮಿ ಅಧ್ಯಕ್ಷ ಸ್ಥಾನ: ಮೂರು ಬಾರಿ ಕರ್ನಾಟಕ‌ ಜಾನಪದ ಅಕಾಡೆಮಿ ಸದಸ್ಯರಾಗಿ ಒಂದು ಬಾರಿ ಅಧ್ಯಕ್ಷರಾಗಿ, ಕರ್ನಾಟಕ‌ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾಗಿಯೂ ಜಾನಪದ ಕ್ಷೇತ್ರಕ್ಕೆ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು: ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕರವೇ ‘ಜಾನಪದ ಗಾಯನ ಸಾರ್ವಭೌಮ’ ಪ್ರಶಸ್ತಿ, ‘ಅರೋಹಣ ಕಲಾರೂಪ ಪ್ರಶಸ್ತಿ, ನೆಲದ ನುಡಿಕಾರ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
75ರ  ಹರೆಯದಲ್ಲೂ  ಡಾ. ಬಾನಂದೂರು ಕೆಂಪಯ್ಯ ಅವರು ಗಾಯನ, ಕಾವ್ಯ- ಕತೆ ರಚನೆಯಲ್ಲಿ ಖುಷಿ ನೆಮ್ಮದಿ ಕಾಣುತ್ತಿದ್ದಾರೆ.

-ಸಿ.ಮಂಜುನಾಥ, ಸಂಪಾದಕರು: ಕರ್ನಾಟಕ ಕಹಳೆ ಡಾಟ್ ಕಾಮ್, ಬಳ್ಳಾರಿ