ಕಷ್ಟದ ಕಣ್ಣೀರ ಕೆರೆ
ಬೆನ್ನಿಗೆ ಬಿದ್ದ ಬೇತಾಳದ ಹೊರೆ
ಕೇಳುವವರಾರು ಹಸಿದವನ ಮೊರೆ
ಬಡವನ ಬದುಕು ಸಿರಿವಂತರ ಮುಷ್ಟಿಯಲ್ಲಿ ಸೆರೆ.
ಬಡವನ ಕಷ್ಟದ ಕಣ್ಣೀರ ಕೆರೆ
ದುಡಿದು ದಣಿದವರ ಬಾಯಿಗೆ ನೊರೆ
ದುಡ್ಡು ದುಗ್ಗಣಿದ್ದವನೇ ಜಗದೊಳಗೆ ದೊರೆ.
ಹೊಟ್ಟೆ ಮೇಲೆ ಹಸಿವಿನ ಬರೆ
ಹೊಟ್ಟೆ ಹಸಿವು ನೀಗಿಸಲು ಗತಿ ತಣ್ಣೀರೆ
ಮನನೊಂದಾಗ ಉದುರುವುದು ಕಣ್ಣೀರೆ.
ಹತ್ತಿಳಿವುದು ಕಲ್ಲು ಕ್ವಾರೆ
ಹೊತ್ತು ಸಾಗುವ ಮಣಭಾರ ಬೇರೆ
ತಲೆಮೇಲೆ ಉಳಿದಿರುವುದು ಹರಿದ ಸೂರೆ.
ಗಿರ ಗಿರನೆ ಗಿರಕಿ ಹೊಡೆವ ಕದಿರೆ
ಗಗನ ಚುಂಬಿಸುವಾಸೆಯೇಕೆ ಬಿದಿರೆ
ಹಸಿದವನ ಹೊಟ್ಟೆಯೊಳಗಿಳಿಬೇಡ ಮದಿರೆ.
ಕಳಚಲಿಲ್ಲ ಬಡತನದ ಪೊರೆ
ಬದುಕಿಗೆ ತಪ್ಪಲಿಲ್ಲ ಕಡು ಬಡತನದ ಹೊರೆ
ಜಗದೀಶ ಆಲಿಸುವುದ್ಯಾವಾಗ ಹಸಿದವನ ಮೊರೆ.

-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಮುದ್ನಾಳ ಯಾದಗಿರಿ ಜಿಲ್ಲೆ.
